ಕೊರಟಗೆರೆ: ಇಲ್ಲಿನ ವಾರದ ಸಂತೆಯನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ್ ನೇತೃತ್ವದಲ್ಲಿ ಜೂನಿಯರ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಯಿತು.
ಕೋವಿಡ್ ಪ್ರಕಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ವಾರ ನಡೆಯುತ್ತಿರುವ ಸಂತೆ ಮೈದಾನ ಕಿರಿದಾಗಿರುವ ಕಾರಣ ಅಂತರ ಕಾಯ್ದುಕೊಳ್ಳುವ ಸಲುವಾಗಿ ಸಂತೆಯನ್ನು ಕಾಲೇಜು ಮೈದಾನಕ್ಕೆ ಸ್ಥಳಾಂತರಿಸುವಂತೆ ವ್ಯಾಪಾರಿಗಳಿಗೆ ಅಧಿಕಾರಿಗಳು ಮನವಿ ಮಾಡಿದರು.
ಸೋಮವಾರದಿಂದ ಸಂತೆಯನ್ನು ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಸುವಂತೆ ಭಾನುವಾರ ಬೆಳಿಗ್ಗೆಯಿಂದ ಆಟೊ ಪ್ರಚಾರ ಕೈಗೊಳ್ಳಲಾಗಿತ್ತು. ಆದರೂ, ವ್ಯಾಪಾರಿಗಳು ಎಂದಿನಂತೆ ಈ ಮೊದಲು ನಡೆಯುತ್ತಿದ್ದ ಸಂತೆ ಸ್ಥಳಕ್ಕೆ ತರಕಾರಿ, ಹೂ, ಹಣ್ಣು ಇತರೆ ವಸ್ತುಗಳನ್ನು ಆಟೊ, ಟೆಂಪೋಗಳಲ್ಲಿ ತುಂಬಿಕೊಂಡು ಬಂದು ಇಳಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಮುಖ್ಯಾಧಿಕಾರಿ ಲಕ್ಷ್ಮಣ ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ, ‘ಸಂತೆಯನ್ನು ಜೂನಿಯರ್ ಕಾಲೇಜು ಆವರಣದಲ್ಲಿ ನಡೆಸಲು ಕ್ರಮವಹಿಸಲಾಗಿದೆ. ಕೋವಿಡ್ ಪ್ರಕರಣ ಕಡಿಮೆಯಾಗುವವರೆಗೂ ಅಲ್ಲಿಯೇ ಸಂತೆ ನಡೆಯುತ್ತಿದೆ. ಅಂತರ ಕಾಯ್ದುಕೊಂಡು ಕಾಲೇಜು ಮೈದಾನದಲ್ಲಿ ವ್ಯಾಪಾರ ಮಾಡಬೇಕು’ ಎಂದು ಮನವಿ ಮಾಡಿದರು.
ಈ ವೇಳೆ ಕೆಲ ವ್ಯಾಪಾರಿಗಳು ಮಾಮೂಲಿ ಸಂತೆ ಮೈದಾನದಲ್ಲೆ ಸಂತೆ ನಡೆಸುತ್ತೇವೆ ಎಂದು ಅಧಿಕಾರಿಗಳ ಜೊತೆ ವಾಗ್ವಾದಕ್ಕಿಳಿದರು. ಎಲ್ಲಾ ಕಡೆ ಮಾರುಕಟ್ಟೆ, ಸಂತೆ ಆಯಾಯ ಸ್ಥಳದಲ್ಲೆ ನಡೆಯುತ್ತಿದೆ. ಕೊರಟಗೆರೆಯಲ್ಲಿ ಮಾತ್ರ ಸಂತೆ ಸ್ಥಳಾಂತರ ಯಾಕೆ ಎಂದು ಪ್ರಶ್ನಿಸಿದರು.ಯುಗಾದಿ ಹಬ್ಬ ಇರುವ ಕಾರಣ ಮಾಮೂಲಿ ಜಾಗದಲ್ಲೆ ಸಂತೆ ನಡೆಸಲು ಅವಕಾಶ ನೀಡಬೇಕೆಂದು ಅಧಿಕಾರಿಗಳನ್ನು ಮನವಿ ಮಾಡಿದರು. ಹಾಲಿ ಜಾಗ ಕಿರಿದಾಗಿದ್ದು, ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳುವುದು ಹಾಗೂ ನಿಯಮಾವಳಿ ಪಾಲಿಸುವುದು ಅನಿವಾರ್ಯ ವಾಗಿದೆ ಎಂದು ವ್ಯಾಪಾರಿ ಗಳಿಗೆ ಮನವರಿಕೆ ಮಾಡಿಕೊಟ್ಟರು.
ಸಂತೆ ಮೈದಾನದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ತರಕಾರಿ, ಹೂ ಹಣ್ಣಿನ ವ್ಯಾಪಾರಿಗಳು ಪಟ್ಟಣದ ಮುಖ್ಯರಸ್ತೆ ಬದಿಯಲ್ಲೇ ಅಂಗಡಿ ಇಟ್ಟು ವ್ಯಾಪಾರ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.