ADVERTISEMENT

ಹಾಲು ಖರೀದಿ ದರ ಯಥಾಸ್ಥಿತಿ

ರೈತರಿಂದ ಖರೀದಿಸುವ ಹಾಲಿನ ದರವನ್ನು ಇಳಿಕೆ ಮಾಡಿಲ್ಲ: ತುಮುಲ್

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 5:44 IST
Last Updated 9 ಜುಲೈ 2024, 5:44 IST
ಹಾಲು ಸಂಗ್ರಹ
ಹಾಲು ಸಂಗ್ರಹ   

ತುಮಕೂರು: ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಪ್ರಮಾಣ ಹೆಚ್ಚಳವಾಗಿದ್ದರೂ ರೈತರಿಂದ ಖರೀದಿಸುವ ಹಾಲಿನ ಬೆಲೆಯಲ್ಲಿ ಇಳಿಕೆ ಮಾಡಿಲ್ಲ. ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್) ಹಾಲು ಖರೀದಿಸುವ ದರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.

ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ಪ್ರಮಾಣವನ್ನು ಹೆಚ್ಚಳ ಮಾಡಿ, ಮಾರಾಟ ಬೆಲೆಯನ್ನು ಏರಿಸಲಾಗಿದೆ. ಅದು ಬಿಟ್ಟರೆ ರೈತರಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳು (ಡೇರಿ) ಖರೀದಿಸುವ ಹಾಲಿನ ದರವನ್ನು ಇಳಿಕೆ ಮಾಡಿಲ್ಲ. ಈ ಹಿಂದೆ ಲೀಟರ್‌ಗೆ ₹31.98 ಕೊಡುತ್ತಿದ್ದು, ಈಗಲೂ ಅದೇ ಸ್ಥಿತಿ ಮುಂದುವರಿದೆ. ಬೆಲೆ ಇಳಿಕೆ ಅಥವಾ ಏರಿಕೆ ಮಾಡುವ ನಿರ್ಧಾರ ಕೈಗೊಂಡಿಲ್ಲ. ಸದ್ಯಕ್ಕೆ ಬೆಲೆ ಇಳಿಕೆ ಮಾಡುವ ಪ್ರಸ್ತಾಪವಿಲ್ಲ ಎಂದು ತುಮುಲ್ ವ್ಯವಸ್ಥಾಪಕ ನಿರ್ದೇಶ ಡಾ.ಬಿ.ಪಿ.ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ವರ್ಷದ ನವೆಂಬರ್ ಸಮಯದಲ್ಲಿ ರೈತರಿಂದ ಖರೀದಿಸುವ ಲೀಟರ್ ಹಾಲಿಗೆ ₹2 ಕಡಿತ ಮಾಡಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಬೆಲೆ ಕಡಿತ ಮಾಡಿಲ್ಲ. ಹಾಲು ಸಂಗ್ರಹ ಹೆಚ್ಚಿದ್ದರೂ ಖರೀದಿ ಬೆಲೆ ಇಳಿಕೆ ಮಾಡಿಲ್ಲ. ಯಥಾಸ್ಥಿತಿ ಮುಂದುವರಿದಿದೆ ಎಂದು ಅವರು ಹೇಳಿದರು.

ADVERTISEMENT

ಜಿಲ್ಲೆಯಲ್ಲಿ 1,345 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು, ಜೂನ್ ತಿಂಗಳಲ್ಲಿ ದಾಖಲೆಯ 9.82 ಲಕ್ಷ ಲೀಟರ್ ಹಾಲು ಸಂಗ್ರಹವಾಗಿತ್ತು. ಪ್ರಸ್ತುತ 9.50 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಮುಂದಿನ ದಿನಗಳಲ್ಲಿ ಹಾಲು ಸಂಗ್ರಹದಲ್ಲಿ ಇದೇ ಪರಿಸ್ಥಿತಿ ಮುಂದುವರಿಯಬಹುದು, ಇಲ್ಲವೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಬಹುದು ಎಂದು ಹೇಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.