ADVERTISEMENT

ಮುಂದುವರಿದ ಸಮುದಾಯದಿಂದ ವಾಲ್ಮೀಕಿ ಅವಹೇಳನ: ಸಚಿವ ರಾಜಣ್ಣ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 14:24 IST
Last Updated 20 ಅಕ್ಟೋಬರ್ 2024, 14:24 IST
<div class="paragraphs"><p>ತುಮಕೂರಿನಲ್ಲಿ ಭಾನುವಾರ&nbsp;ಜಿಲ್ಲಾ ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಿಡ್ಲಕೋಣ ವಾಲ್ಮೀಕಿ ಶಾಖಾ ಮಠದ ಸಂಜಯಕುಮಾರ ಸ್ವಾಮೀಜಿ ಭಾಗವಹಿಸಿದ್ದರು</p></div>

ತುಮಕೂರಿನಲ್ಲಿ ಭಾನುವಾರ ಜಿಲ್ಲಾ ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಿಡ್ಲಕೋಣ ವಾಲ್ಮೀಕಿ ಶಾಖಾ ಮಠದ ಸಂಜಯಕುಮಾರ ಸ್ವಾಮೀಜಿ ಭಾಗವಹಿಸಿದ್ದರು

   

ತುಮಕೂರು: 'ಮುಂದುವರಿದ ಸಮುದಾಯದ ಕೆಲವರು ತಳ ಸಮುದಾಯದ ಕವಿಗಳು, ಮುಖಂಡರನ್ನು ಅವಹೇಳನ ಮಾಡುತ್ತಿದ್ದಾರೆ. ವಾಲ್ಮೀಕಿಯನ್ನು ದರೋಡೆಕೋರ ಎನ್ನುವವರು ಅಯೋಗ್ಯರು, ದಡ್ಡರು" ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಜಿಲ್ಲಾ ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ಧಿ ಸಂಘ, ವಾಲ್ಮೀಕಿ ವಿದ್ಯಾವರ್ಧಕ ಸಂಘ, ನಾಯಕ ಮಹಿಳಾ ಸಮಾಜ, ಶಬರಿ ಪತ್ತಿನ ಸಹಕಾರ ಸಂಘ, ವಾಲ್ಮೀಕಿ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ADVERTISEMENT

ರಾಮಾಯಣ, ಮಹಾಭಾರತ ಸೇರಿ ಹಿಂದೂ ಧರ್ಮದ ಎಲ್ಲ ಗ್ರಂಥಗಳನ್ನು ಬರೆದವರು ಶೂದ್ರ ಸಮುದಾಯದವರು. ಶೂದ್ರರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ, ನಿಜವಾದ ಇತಿಹಾಸ ತಿರುಚಿ ತಮಗೆ ಬೇಕಾದಂತೆ ಹೇಳಿಕೊಳ್ಳುತ್ತಿದ್ದಾರೆ. ನಮ್ಮ ಮಕ್ಕಳಿಗೆ ನೈಜ ಇತಿಹಾಸ ಮನವರಿಕೆ ಮಾಡಿಕೊಡಬೇಕು. ವಾಲ್ಮೀಕಿ ಬಗ್ಗೆ ಅಪಪ್ರಚಾರ ಮಾಡುವುದನ್ನು ಖಂಡಿಸಬೇಕು ಎಂದರು.

ರಾಜಕೀಯ ಅಧಿಕಾರ ಗಳಿಸಿದಾಗ ಮಾತ್ರ ಸ್ವಾಭಿಮಾನದ ಬದುಕು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಇನ್ನೊಬ್ಬರ ಹತ್ತಿರ ಹೋಗಿ ಬೇಡುವ ಸ್ಥಿತಿ ಬರುತ್ತದೆ. ಎಲ್ಲರು ಸಂಘಟಿತರಾಗಿ ರಾಜಕೀಯ ಪ್ರಾತಿನಿಧ್ಯ ಪಡೆಯಬೇಕು. ಜನಪ್ರತಿನಿಧಿಗಳು ಒಂದು ಜಾತಿಗೆ ಸೀಮಿತವಾಗದೆ, ಜನ ನಾಯಕರಾಗಿ ರೂಪುಗೊಳ್ಳಬೇಕು. ಅಸಹಾಯಕರ ಕಷ್ಟಕ್ಕೆ ನೆರವಾಗುವ ಮನಸ್ಥಿತಿ ರೂಢಿಸಿಕೊಳ್ಳಬೇಕು. ಧ್ವನಿ ಇಲ್ಲದವರ ಧ್ವನಿಯಾಗಬೇಕು. ಅವಕಾಶ ವಂಚಿತ ಸಮುದಾಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ವಾಲ್ಮೀಕಿ ಸಮುದಾಯದಲ್ಲಿ ಹತ್ತಾರು ಗುಂಪುಗಳಾಗಿವೆ. ನಮ್ಮನ್ನು ನಾವೇ ಹೀಯಾಳಿಸಿಕೊಳ್ಳುತ್ತಿದ್ದೇವೆ. ಯಾರನ್ನೂ ದ್ವೇಷಿಸದೆ, ಎಲ್ಲರು ಸಂಘಟಿತರಾಗಬೇಕು. ಮುಂದಿನ ದಿನಗಳಲ್ಲಿ ಪ್ರತಿ ತಾಲ್ಲೂಕಿನಲ್ಲಿ ಪ್ರತಿಭಾ ಪುರಸ್ಕಾರ ನೆರವೇರಿಸದರೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಉಪನ್ಯಾಸಕ ಎಲ್.ಪಿ.ರಾಜು, ‘ವಾಲ್ಮೀಕಿ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡದ ಮನುವಾದಿಗಳು ಅವರನ್ನು ದರೋಡೆಕೋರ ಎಂದು ಬಿಂಬಿಸಿದ್ದಾರೆ. ರಾಮನನ್ನು ವೈಭವೀಕರಣ ಮಾಡುತ್ತಾ, ವಾಲ್ಮೀಕಿಯನ್ನು ನೇಪಥ್ಯಕ್ಕೆ ತಳ್ಳಲಾಗಿದೆ. ಅವರನ್ನು ತೇಜೋವಧೆ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ಶಿರಾ ತಾಲ್ಲೂಕಿನ ಶಿಡ್ಲಕೋಣ ವಾಲ್ಮೀಕಿ ಶಾಖಾ ಮಠದ ಸಂಜಯಕುಮಾರ ಸ್ವಾಮೀಜಿ, ಮಾಜಿ ಶಾಸಕ ಸಾ.ಲಿಂಗಯ್ಯ, ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಎಸ್.ಆರ್.ಶಾಂತಲಾ ರಾಜಣ್ಣ, ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್.ಸಿ.ಪುರುಷೋತ್ತಮ್, ಮುಖಂಡರಾದ ಬಿ.ಜಿ.ಕೃಷ್ಣಪ್ಪ, ರಾಮಚಂದ್ರಪ್ಪ, ಕೆ.ಆರ್.ರಾಜ್‌ಕುಮಾರ್, ಕೆ.ಎನ್.ಗಂಗಾಧರ್ ಮೊದಲಾದವರು ಪಾಲ್ಗೊಂಡಿದ್ದರು.

ತುಮಕೂರಿನಲ್ಲಿ ಭಾನುವಾರ ನಡೆದ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ

ಅಧಿಕಾರಿ ಮೂರ್ಖ: ರಾಜಣ್ಣ

ಕೊರಟಗೆರೆಯಲ್ಲಿ ರಾತ್ರೋರಾತ್ರಿ ಪ್ರತಿಷ್ಠಾಪಿಸಿದ್ದ ವಾಲ್ಮೀಕಿ ಪುತ್ಥಳಿ ತೆರವುಗೊಳಿಸಿದ್ದ‌ಕ್ಕೆ ಸಚಿವ ಕೆ.ಎನ್‌.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು. ಸಮುದಾಯದ ಮುಖಂಡರು ಕದ್ದುಮುಚ್ಚಿ ಪುತ್ಥಳಿ ಪ್ರತಿಷ್ಠಾಪಿಸುವ ಅವಶ್ಯಕತೆ ಏನಿತ್ತು? ಎಲ್ಲರು ಸೇರಿಕೊಂಡು ವ್ಯವಸ್ಥಿತವಾಗಿ ಕಾರ್ಯಕ್ರಮ ಮಾಡಬಹುದು. ಅಧಿಕಾರಿ ‘ಪುತ್ಥಳಿಯನ್ನು ಮತ್ತೊಂದು ಕಡೆ ಪ್ರತಿಷ್ಠಾಪಿಸುತ್ತೇವೆ’ ಎಂದು ಜನರ ಮನವೊಲಿಸಬಹುದಿತ್ತು. ವಿಗ್ರಹ ತೆರವುಗೊಳಿಸಿದ ಅಧಿಕಾರಿ ಮೂರ್ಖ ನೀವು ಮಾಡಿದ್ದು ತಪ್ಪು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.