ADVERTISEMENT

ತಿಪಟೂರು: ಕಾಣೆಯಾದ ಮಕ್ಕಳು ಶವವಾಗಿ ಪತ್ತೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 14:39 IST
Last Updated 8 ನವೆಂಬರ್ 2024, 14:39 IST
ತಿಪಟೂರು ತಾಲ್ಲೂಕಿನ ಹುಚ್ಚನಹಟ್ಟಿ ಗ್ರಾಮದ ಸಮೀಪ ಎತ್ತಿನಹೊಳೆ ನಾಲೆಯ ಕಾಮಗಾರಿ ಬಳಿ ತೆಗೆದಿರುವ ಗುಂಡಿ
ತಿಪಟೂರು ತಾಲ್ಲೂಕಿನ ಹುಚ್ಚನಹಟ್ಟಿ ಗ್ರಾಮದ ಸಮೀಪ ಎತ್ತಿನಹೊಳೆ ನಾಲೆಯ ಕಾಮಗಾರಿ ಬಳಿ ತೆಗೆದಿರುವ ಗುಂಡಿ   

ತಿಪಟೂರು: ತಾಲ್ಲೂಕಿನ ಹುಚ್ಚನಹಟ್ಟಿ ಗ್ರಾಮದ ಸಮೀಪ ಎತ್ತಿನಹೊಳೆ ನಾಲೆಯ ಕಾಮಗಾರಿ ಬಳಿ ತೆಗೆದಿದ್ದ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.

ಹುಚ್ಚನಹಟ್ಟಿ ಗ್ರಾಮದ ಯದುವೀರ್ (8) ಹಾಗೂ ಮನೋಹರ್ (10) ಮೃತರು.

ಗುರುವಾರ ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಬಂದಿದ್ದ ಮಕ್ಕಳು, ನಂತರ ಹೊರ ಹೋಗಿದ್ದರು. ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಆತಂಕಗೊಂಡ ಪೋಷಕರು ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶುಕ್ರವಾರ ಬೆಳಿಗ್ಗೆ ಇಬ್ಬರು ಬಾಲಕರ ಶವ ಪತ್ತೆಯಾಗಿದೆ.

ADVERTISEMENT

ನಗರಕ್ಕೆ ಹೊಂದಿಕೊಂಡಿರುವ ಹುಚ್ಚನಹಟ್ಟಿ ಗ್ರಾಮದ ಬಳಿ ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಸ್ಥಳಕ್ಕೆ ಹೋಗಿದ್ದ ಮಕ್ಕಳು ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು ಶವಗಳನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದರು.

ಆಂಬುಲೆನ್ಸ್ ಬಂದರೂ ಶವವನ್ನು ಎತ್ತಲು ಬಿಡಲಿಲ್ಲ. ಮಕ್ಕಳ ಸಾವಿಗೆ ನ್ಯಾಯ ಸಿಗುವವರೆಗೆ ಸ್ಥಳದಿಂದ ಶವ ಎತ್ತಲು ಬಿಡುವುದಿಲ್ಲ. ಸೂಕ್ತ ಪರಿಹಾರ ನೀಡದೆ ಎತ್ತಿನಹೊಳೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಹುಚ್ಚನಹಟ್ಟಿ ಗ್ರಾಮದ ಯದುವೀರ್ ತಂದೆ ಮುನಿಸ್ವಾಮಿಗೆ ಒಬ್ಬನೇ ಮಗನಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮನೋಹರ್ ತಂದೆ ನಟರಾಜುಗೆ ಇಬ್ಬರು ಮಕ್ಕಳು. ಮಗನನ್ನು ಕಳೆದುಕೊಂಡು ಕುಟುಂಬದಲ್ಲಿ ಶೋಕ ಮಡುಗಟ್ಟಿತ್ತು.

ಶಾಸಕ ಕೆ.ಷಡಕ್ಷರಿ ಕುಟುಂಬದವರನ್ನು ಸಮಾಧಾನಪಡಿಸಿ ಸ್ಥಳಕ್ಕೆ ಎತ್ತಿನಹೊಳೆ ಕಾಮಗಾರಿ ನಡೆಸುತ್ತಿರುವ ಅಧಿಕಾರಿಗಳು, ಇಂಜಿನಿಯರ್‌ಗಳನ್ನು ಕರೆಯಿಸಿ ಚರ್ಚಿಸಿದರು. ಕಾಮಗಾರಿ ನಡೆಯುವ ಸ್ಥಳದಲ್ಲಿ ಸೂಕ್ತ ಭದ್ರತೆ ಒದಗಿಸಿ ಕೆಲಸ ಮಾಡಲು ಸೂಚಿಸಿದರು.

₹1 ಕೋಟಿ ಪರಿಹಾರಕ್ಕೆ ಬೇಡಿಕೆ

ಎತ್ತಿನಹೊಳೆ ಕಾಮಗಾರಿ ಸ್ಥಳದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ಮೃತ ಮಕ್ಕಳ ಕುಟುಂಬಸ್ಥರಿಗೆ ₹1 ಕೋಟಿ ಪರಿಹಾರ ನೀಡುವಂತೆ ಆಗ್ರಹಿಸಿದರು. ಸದ್ಯಕ್ಕೆ ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ಕೊಡುವಂತೆ ಶಾಸಕರ ಮಧ್ಯಸ್ಥಿಕೆಯಲ್ಲಿ ತೀರ್ಮಾನಿಸಲಾಯಿತು. ಮುಂದಿನ ದಿನದಲ್ಲಿ ಹೆಚ್ಚಿನ ಪರಿಹಾರ ನೀಡುವುದಾಗಿ ಭರವಸೆ ನೀಡಿದಾಗ ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಸಾರ್ವಜನಿಕ ಆಸ್ವತ್ರೆಗೆ ಸ್ಥಳಾಂತರಿಸಲಾಯಿತು.

ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ. ವೆಂಕಟ್, ಡಿಎಸ್‌ಪಿ ವಿನಾಯಕ ಶೆಟಗೇರಿ, ಪೊಲೀಸ್ ಇನ್‌ಸ್ಪೆಕ್ಟರ್‌ ಸಿದ್ದರಾಮೇಶ್ವರ, ವೆಂಕಟೇಶ್, ತಹಶೀಲ್ದಾರ್ ಪವನ್‌ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜು ಬೇಟಿ ನೀಡಿದ್ದರು.

ತಿಪಟೂರು ತಾಲ್ಲೂಕಿನ ಹುಚ್ಚನಹಟ್ಟಿ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ
ಸ್ಥಳಕ್ಕೆ ಆಗಮಿಸಿದ ಶಾಸಕ ಕೆ.ಷಡಕ್ಷರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವೆಂಕಟ್ ಡಿಎಸ್‌ಪಿ ವಿನಾಯಕ ಶೆಟಗೇರಿ ಬೇಟಿ
ಕುಟುಂಬಸ್ಥರ ಆಕ್ರಂದನ
ಮುಂದೆ ಇಂತಹ ಅವಘಡ ಆಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇನೆ
ಕೆ.ಷಡಕ್ಷರಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.