ADVERTISEMENT

ಹುಣಸೆ ಪಾರ್ಕ್‌ ನಿರ್ಮಾಣಕ್ಕೆ ಒತ್ತು: ಶಾಸಕ ಟಿ.ಬಿ.ಜಯಚಂದ್ರ

ತಾಂತ್ರಿಕ ಸಮಿತಿ ಸಭೆಯಲ್ಲಿ ಶಾಸಕ ಟಿ.ಬಿ.ಜಯಚಂದ್ರ ಭರವಸೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 14:16 IST
Last Updated 6 ಜುಲೈ 2024, 14:16 IST
ಶಿರಾದಲ್ಲಿ ಶನಿವಾರ ಹುಣಸೆ ಪಾರ್ಕ್ ಸ್ಥಾಪಿಸುವ ಬಗ್ಗೆ ನಡೆದ ತಾಂತ್ರಿಕ ಸಮಿತಿ ಸಭೆಯಲ್ಲಿ ಅಧಿಕಾರಿಗಳ ಜತೆ ಶಾಸಕ ಟಿ.ಬಿ.ಜಯಚಂದ್ರ ಚರ್ಚೆ ನಡೆಸಿದರು
ಶಿರಾದಲ್ಲಿ ಶನಿವಾರ ಹುಣಸೆ ಪಾರ್ಕ್ ಸ್ಥಾಪಿಸುವ ಬಗ್ಗೆ ನಡೆದ ತಾಂತ್ರಿಕ ಸಮಿತಿ ಸಭೆಯಲ್ಲಿ ಅಧಿಕಾರಿಗಳ ಜತೆ ಶಾಸಕ ಟಿ.ಬಿ.ಜಯಚಂದ್ರ ಚರ್ಚೆ ನಡೆಸಿದರು    

ಶಿರಾ: ತಾಲ್ಲೂಕಿನಲ್ಲಿ ಹುಣಸೆ ಪಾರ್ಕ್ ಸ್ಥಾಪಿಸುವ ಮೂಲಕ‌ ಹುಣಸೆಗೆ ಉತ್ತಮ ಮಾರುಕಟ್ಟೆ ಒದಗಿಸಲಾಗುವುದು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ಶನಿವಾರ ಹುಣಸೆ ಪಾರ್ಕ್ ಸ್ಥಾಪಿಸುವ ಬಗ್ಗೆ ನಡೆದ ತಾಂತ್ರಿಕ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 6461.09 ಹೆಕ್ಟೇರ್ ಪ್ರದೇಶದಲ್ಲಿ 30520.99 ಮೆಟ್ರಿಕ್ ಟನ್ ಹುಣಸೆ ಉತ್ಪಾದನೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೂಲಿಕಾರರ ಸಮಸ್ಯೆಯಿಂದ ರೈತರು ಸಂಕಷ್ಟಪಡುತ್ತಿದ್ದಾರೆ. ಹಣ್ಣು ಮತ್ತು ಬೀಜ ಬೇರ್ಪಡಿಸಲು ರೈತರಿಗೆ ಅನುಕೂಲವಾದ ಉಪಕರಣ ತಯಾರಿಸಿದರೆ ಹೆಚ್ಚು ರೈತರು ಹುಣಸೆ ಕಡೆ ಮತ್ತೆ ಮುಖ ಮಾಡುತ್ತಾರೆ ಎಂದರು.

ADVERTISEMENT

ಹುಣಸೆ ಪಾರ್ಕ್‌ ನಿರ್ಮಾಣ ಮಾಡುವ ಮೂಲಕ‌ ಹುಣಸೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಹುಣಸೆ ಉಪಯೋಗ ಬಗ್ಗೆ ಮನವರಿಕೆ ಮಾಡಬೇಕು. ಹುಣಸೆ ಪಾರ್ಕ್‌ ನಿರ್ಮಾಣಕ್ಕೆ‌ ಅಗತ್ಯವಾದ 20 ಎಕರೆ ಜಮೀನು ನೀಡಲಾಗುವುದು. ಇಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಿದರೆ ಅನುಕೂಲವಾಗಲಿದೆ ಎಂದರು.

ಹುಣಸೆಯಿಂದ ವಿವಿಧ ಉತ್ಪನ್ನ ತಯಾರು ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಅಧಿಕಾರಿಗಳು ಶ್ರಮಿಸಬೇಕು. ಇದರ ಜತೆಗೆ ಜಮ್ಮು ನೇರಳೆ ಹಣ್ಣು ಸೇರಿದಂತೆ ವಿವಿಧ ಹಣ್ಣು ಬಳಕೆ ಮಾಡಿಕೊಂಡು ರೈತರು ವರ್ಷ ಪೂರ್ತಿ ಲಾಭ ಪಡೆಯಲು ಅನುಕೂಲವಾಗುವಂತೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ತಾಂತ್ರಿಕ ಸಮಿತಿ ಸಭೆಯಲ್ಲಿ ಬಾಗಲಕೋಟೆ ತೋಟಗಾರಿಕೆ ವಿಶ್ವ ವಿದ್ಯಾನಿಲಯದ ಸಂಶೋಧನ ನಿರ್ದೇಶಕ ಡಾ.ಮಹೇಶ್ವರಪ್ಪ, ಬಾಗಲಕೋಟೆ ತೋಟಗಾರಿಕೆ ಜಂಟಿನಿರ್ದೇಶಕ (ತೋಟದ ಬೆಳೆಗಳು ಮತ್ತು ಸಸ್ಯ ಸಂರಕ್ಷಣೆ) ಕದಿರೇಗೌಡ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಲಿಂಗರಾಜು, ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಪ್ರಶಾಂತ್, ವಿಜ್ಞಾನಿಗಳು, ಕೇಂದ್ರ, ಹಿರೇಹಳ್ಳಿ, ತೋಟಗಾರಿಕೆ ಉಪನಿರ್ದೇಶಕಿ ಶಾರದಮ್ಮ, ತಹಶೀಲ್ದಾರ್ ಡಾ.ದತ್ತಾತ್ರೇಯ ಜೆ.ಗಾದಾ, ವಲಯ ಅರಣ್ಯಾಧಿಕಾರಿ ನವನೀತ್, ರಾಘವೇಂದ್ರ, ತೋಟಗಾರಿಕೆ ನಿರ್ದೇಶಕ ಸುಧಾಕರ್, ಕೃಷಿ‌ ಸಹಾಯಕ‌ ನಿರ್ದೇಶಕ ನಾಗರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.