ತುಮಕೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣ ಖಂಡಿಸಿ ಬಿಜೆಪಿ ಬೆಂಗಳೂರಿನಿಂದ ಮೈಸೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದೆ.
‘ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಜಿಲ್ಲೆಯಿಂದಲೇ ಪ್ರತಿಭಟನೆ ಆರಂಭವಾಗಲಿದೆ. ಬಿಜೆಪಿಯವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಸುಳ್ಳನ್ನು ಸತ್ಯ ಎಂದು ಬಿಂಬಿಸಲು ಹೊರಟಿದ್ದಾರೆ. ನಾವು ಜನರಿಗೆ ಸತ್ಯವನ್ನು ತಿಳಿಸುತ್ತೇವೆ’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಇಲ್ಲಿ ಶನಿವಾರ ಮಾಹಿತಿ ನೀಡಿದರು.
‘ಆರೋಪ ಮಾಡುವವರು ಸಹ ಮುಡಾದ ಫಲಾನುಭವಿಗಳು. ಬೆಂಗಳೂರಲ್ಲಿ ಇದ್ದು ಮೈಸೂರಿನಲ್ಲಿ ವಾಸವಿದ್ದೇನೆ ಎಂದು ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಪಡೆದಿದ್ದಾರೆ. ಈಗ ಅವರ ಸ್ಥಿತಿ ‘ನಾ ಕಳ್ಳ, ಪರರನ್ನು ನಂಬ’ ಎಂಬಂತಾಗಿದೆ. ಆರೋಪ ಮಾಡುವವರು ತಮ್ಮ ನಿವೇಶನ ಮುಡಾಗೆ ಹಸ್ತಾಂತರಿಸಲಿ’ ಎಂದು ಸವಾಲು ಹಾಕಿದರು.
2011ರ ಮಾರ್ಚ್ 17ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಡಾ ನಿವೇಶನ ಅಕ್ರಮ ಕುರಿತು ವಿಧಾನ ಪರಿಷತ್ತಿನಲ್ಲಿ ಚರ್ಚಿಸಿದ್ದರು. ಯಾರ ಕಾಲದಲ್ಲಿ ಎಷ್ಟು ನಿವೇಶನಗಳು ಹಂಚಿಕೆಯಾಗಿವೆ ಎಂದು ಹೇಳಿದ್ದರು. ಅಂದಿನ ಫಲಾನುಭವಿಗಳೇ ಈಗ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಸುತ್ತಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರ, ವಿರೋಧ ಪಕ್ಷದವರ ಕೈವಾಡ ಇದೆ. ಇದೊಂದು ಯೋಜಿತ ಪಿತೂರಿ ಎಂದು ಕಿಡಿಕಾರಿದರು.
ಹಿಂದುಳಿದ ಸಮುದಾಯದ ನಾಯಕರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬಾರದು ಎಂದು ಪಿತೂರಿ ನಡೆಸುತ್ತಿದ್ದಾರೆ. ಇದು ಅಹಿಂದ ವರ್ಗಗಳ ವಿರುದ್ಧ ಮಾಡುತ್ತಿರುವ ಹೀನ ಕೃತ್ಯ, ಸಂಚು. ಎಲ್ಲ ಅಹಿಂದ ವರ್ಗಗಳ ಮುಖಂಡರ ಜತೆ ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಸಹಕಾರ ಸಂಘಗಳಲ್ಲಿ ಮೀಸಲಾತಿ
ಸಹಕಾರ ಸಂಘಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ ಮತ್ತು ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಮಸೂದೆಗೆ ವಿಧಾನ ಮಂಡಲದಲ್ಲಿ ಅನುಮೋದನೆ ದೊರೆತಿದೆ ಎಂದು ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಪ್ರಾಥಮಿಕ ಸಹಕಾರ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘ, ರಾಜ್ಯ ಮಟ್ಟದ ಸಹಕಾರ ಸಂಘಗಳಿಗೆ ಮೀಸಲಾತಿ ಅನ್ವಯವಾಗಲಿದೆ. ಇದರಿಂದ ಅವಕಾಶ ವಂಚಿತ ಸಮುದಾಯಗಳಿಗೆ ಅನುಕೂಲವಾಗಲಿದೆ. ಸಹಕಾರ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಹೇಳಿದರು.
ಬಾಕಿ ಇರುವ ಹಾಲಿನ ಪ್ರೋತ್ಸಾಹ ಧನ ₹952 ಕೋಟಿ ಬಿಡುಗಡೆಗೆ ಸರ್ಕಾರ ಮುಂದಾಗಿದೆ. ಹಂತ ಹಂತವಾಗಿ ಹಣ ಪಾವತಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.