ADVERTISEMENT

ಮೂಲೆ ಗುಂಪಾದ ಮೂಡಲಪಾಯ: ಕೊನೇಹಳ್ಳಿ ಯಕ್ಷಗಾನ ಕೇಂದ್ರಕ್ಕೆ ಬೇಕಿದೆ ಮರುಜೀವ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 6:49 IST
Last Updated 18 ನವೆಂಬರ್ 2024, 6:49 IST
ಕೊನೇಹಳ್ಳಿ ಮೂಡಲಪಾಯ ಯಕ್ಷಗಾನ ಕೇಂದ್ರ
ಕೊನೇಹಳ್ಳಿ ಮೂಡಲಪಾಯ ಯಕ್ಷಗಾನ ಕೇಂದ್ರ   

ತಿಪಟೂರು: ಸಂಗೀತ, ಕುಣಿತ, ಅಲಂಕಾರ, ನೃತ್ಯ, ಸಾಹಿತ್ಯ, ಸಂಭಾಷಣೆ, ಅಭಿನಯ ವೇಷಭೂಷಣಗಳ ಸಮ್ಮಿಳಿತವಾಗಿರುವ ಮೂಡಲಪಾಯ ಯಕ್ಷಗಾನ ಅವಸಾನದ ಅಂಚು ತಲುಪಿದೆ. ಈ ಕಲಾಪ್ರಕಾರ ಇಂದು ಪ್ರೋತ್ಸಾಹವಿಲ್ಲದೆ ಸೊರಗುತ್ತಿದೆ.

ಕಲಾ ಪೋಷಕರಾದ ಬಿ.ನಂಜುಡಪ್ಪ, ಭಾಗವತರಾಗಿದ್ದ ಪಟೇಲ್ ನರಸಪ್ಪ ಹಾಗೂ ಜನಪದ ತಜ್ಞ ಜಿ.ಶಂ.ಪರಮಶಿವಯ್ಯ ಮೊದಲಾದವರು ಸೇರಿ ಕೊನೇಹಳ್ಳಿಯಲ್ಲಿ ಮೂಡಲಪಾಯ ಯಕ್ಷಗಾನ ಪುನಃಶ್ಚೇತನಕ್ಕೆ 1969ರಲ್ಲಿ ಬಿದಿರೆಯಮ್ಮ ಯಕ್ಷಗಾನ ಮಂಡಳಿ ಸ್ಥಾಪಿಸಿದರು. ಕೊನೇಹಳ್ಳಿಗೆ ‘ಮೂಡಲಪಾಯ ಯಕ್ಷಗಾನ ಕಲಾಕಾಶಿ’ ಎಂಬ ಬಿರುದು ಬಂತು. ಈ ಕಲೆಯ ಪುನರುತ್ಥಾನಕ್ಕಾಗಿ ಇದೇ ಮಂಡಳಿಯಿಂದ 1982ರಲ್ಲಿ ಮೂಡಲಪಾಯ ಯಕ್ಷಗಾನ ಟ್ರಸ್ಟ್ ಕೂಡ ಸ್ಥಾಪಿಸಲಾಯಿತು. 1983ರಲ್ಲಿ ಕೊನೇಹಳ್ಳಿಯಲ್ಲಿ ಯಕ್ಷಗಾನ ಬಯಲು ರಂಗಮಂದಿರ ನಿರ್ಮಾಣವಾಯಿತು.

ಸತತ ಪರಿಶ್ರಮದಿಂದ ರೂಪಿಸಿದ ಮೂಡಲಪಾಯ ತಂಡವು ಕರ್ನಾಟಕ, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತ, ನಾಗಪುರ, ಒಡಿಶಾ, ಹೈದರಾಬಾದ್‌ ಸೇರಿದಂತೆ ವಿವಿಧೆಡೆ ನಡೆದ ಉತ್ಸವಗಳಲ್ಲಿ ಭಾಗಿಯಾಯಿತು. ರಾಷ್ಟ್ರೀಯ ಯಕ್ಷಗಾನ ಮೇಳಗಳಲ್ಲಿ ಪ್ರದರ್ಶನ ನೀಡಿತು. ಆಕಾಶವಾಣಿಯಲ್ಲಿ ಹಲವು ಪ್ರಸಂಗಗಳು ಪ್ರಸಾರಗೊಂಡಿತು.

ADVERTISEMENT

ಇಲ್ಲಿನ ಮೂಡಲಪಾಯ ಯಕ್ಷಗಾನ ಟ್ರಸ್ಟ್ ಸಹಯೋಗದಲ್ಲಿ ಎಲ್.ಆರ್.ಹೆಗ್ಗಡೆ, ಎಂ.ಎಸ್.ಸುಂಕಾಪುರ, ಎಚ್.ಎಲ್.ನಾಗೇಗೌಡ ಅವರು ಭಾಗವತರು, ಹಿರಿಯ ಯಕ್ಷಗಾನ ಕಲಾವಿದರು, ವಿದ್ವಾಂಸರು ಸೇರಿದಂತೆ 30 ಯಕ್ಷಗಾನ ತಂಡಗಳನ್ನು ಆಹ್ವಾನಿಸಿ 10 ದಿನ ಮೂಡಲಪಾಯ ಕಮ್ಮಟ ಆಯೋಜಿಸಿದ್ದರು. ಈ ಕೇಂದ್ರದ ಮಕ್ಕಳು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಬಾಲಸಂಗಮ್ ಉತ್ಸವದಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೀಡಿದ್ದರು. ಈ ಎಲ್ಲ ಕಾರಣದಿಂದಾಗಿ ಮೂಡಲಪಾಯ ಯಕ್ಷಗಾನವು ತನ್ನ ಅಂತಸತ್ವವನ್ನು ಸ್ವಲ್ಪಮಟ್ಟಿಗೆ ಜೀವಂತವಾಗಿಡುವಲ್ಲಿ ಸಹಕಾರಿಯಾಗಿದೆ.

ಯಾವುದೇ ರಾಜಾಶ್ರಯವಿಲ್ಲದೆ ಬೆಳೆದ ಈ ಕಲೆ ಇಂದಿಗೂ ಉಳಿಯಲು ನೂರಾರು ಭಾಗವತರು, ಹಿಮ್ಮೇಳದವರು, ತಬಲ, ಮೃದಂಗ, ಮುಖವೀಣೆ ಮುಂತಾದ ವಾದ್ಯಗಾರರು, ಸಾವಿರಾರು ಸಂಖ್ಯೆಯ ಕಲಾವಿದರು, ವಸ್ತ್ರವಿನ್ಯಾಸಕರು ಹಾಗೂ ಅಲಂಕಾರಿಕ ಒಡವೆಗಳ ತಯಾರಕರ 
ಶ್ರಮ ಮುಖ್ಯವಾಗಿದೆ.

ಸೊರಗುತ್ತಿರುವ ಮೂಡಲಪಾಯ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸಿ ಉಳಿಸಲು ಅನೇಕರು ಶ್ರಮಿಸುತ್ತಿದ್ದಾರೆ. ಸರ್ಕಾರ ಮತ್ತು ಸಂಘ ಸಂಸ್ಥೆಗಳು ಜಾನಪದ ಲೋಕದೊಂದಿಗೆ ಕೈಜೋಡಿಸಿದರೆ ಸಾಂಸ್ಕೃತಿಕ ಲೋಕದ ಅಸ್ಮಿತೆ, ಗತಕಾಲದ ವೈಭವ ಮರುಕಳಿಸಲು ಸಾಧ್ಯ ಎನ್ನುತ್ತಾರೆ ಸ್ಥಳೀಯರು.

ಕಲೆ ಪ್ರದರ್ಶನ
‘ಕರಿರಾಯ ಚರಿತೆ’ ಮೊದಲ ಕೃತಿ
ಮೂಡಲಪಾಯ ಯಕ್ಷಗಾನಕ್ಕೆ 500 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ದಾಖಲೆಗಳ ಪ್ರಕಾರ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಅಂದೇನಹಳ್ಳಿ ಮೂಡಲಪಾಯದ ಮೂಲಸ್ಥಳ. ಆ ಊರಿನ ಒಕ್ಕಲಿಗ ಸಮಾಜದ ಜೀರಿಗೆ ಕೆಂಪಯ್ಯನ ಹಿರಿಯ ಮಗ ಓದೋ ಕೆಂಪಯ್ಯನ ಮಗನಾದ ಕೆಂಪಣ್ಣಗೌಡನೇ ಮೂಡಲಪಾಯದ ಅತ್ಯಂತ ಪ್ರಾಚೀನ ಕವಿ. 1480ರ ಸುಮಾರಿಗೆ ಈತ ರಚಿಸಿದ ‘ಕರಿರಾಯ ಚರಿತೆ’ಯೇ ಮೂಡಲಪಾಯದ ಮೊಟ್ಟಮೊದಲ ಕೃತಿಯಾಗಿದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ರದರ್ಶನಕ್ಕೆ ಮೂಡಲಪಾಯ ಯಕ್ಷಗಾನ ತಂಡಗಳಿಗೆ ವಿಶೇಷ ಆದ್ಯತೆ ನೀಡಬೇಕು. ಭಾಗವತರು ಮತ್ತು ಕಲಾವಿದರು ಕೂಡ ಇಂದಿನ ಪರಿಸ್ಥಿತಿಗೆ ಹೊಂದಿಕೊಂಡು ರಾತ್ರಿಯಿಡೀ ಮಾಡುವ ಪ್ರದರ್ಶನದ ಬದಲಾಗಿ ಎರಡೂವರೆ ಅಥವಾ ಮೂರು ಘಂಟೆಗೆ ಪ್ರದರ್ಶನ ಸೀಮಿತಗೊಳಿಸಿಕೊಳ್ಳಬೇಕು. ಪ್ರದರ್ಶನದಲ್ಲಿ ಬಳಸುವ ಭಾಷೆಯನ್ನು ಸುಧಾರಿಸಿಕೊಳ್ಳಬೇಕು. ಈಗ ಬಳಸುತ್ತಿರುವ ಅತಿ ಭಾರದ ವಸ್ತ್ರ ಮತ್ತು ಒಡವೆಗಳ ಬದಲು ಅವರ ನಟನೆ ಮತ್ತು ನೃತ್ಯ ಪ್ರದರ್ಶನಕ್ಕೆ ಅನುಕೂಲವಾಗುವಂತೆ ಹಗುರವಾದವುಗಳನ್ನು ಸಿದ್ಧಪಡಿಸಿಕೊಂಡರೆ ಮಾತ್ರೆ  ಮೂಡಲಪಾಯ ಯಕ್ಷಗಾನವನ್ನು ಉಳಿಸಲು ಸಾಧ್ಯ. ಕೆ.ಪುಟ್ಟರಂಗಪ್ಪ ವಿಶ್ರಾಂತ ಪ್ರಾಧ್ಯಾಪಕ
ಮೂಡಲಪಾಯ ಯಕ್ಷಗಾನ ಟ್ರಸ್ಟ್ ಮೂಲಕ 35 ವರ್ಷಗಳಿಂದ ಕಲಾವಿದರು ಕಲೆ ಉಳಿಸುತ್ತಿದ್ದಾರೆ. ವಯಸ್ಸಾದ ಕಲಾವಿದರಿಗೆ ಮಾಸಾಶನ ನೀಡುವಲ್ಲಿ ಸರ್ಕಾರಗಳ ವಿಳಂಬ ಧೋರಣೆ ಅನುಸರಿಸುತ್ತಿವೆ. ಕಲಾವಿದರನ್ನು ಗುರುತಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕಿದೆ
ಉಮೇಶ್ ಕಲಾವಿದ
ಕೋನೇಹಳ್ಳಿ ಭಾಗದಲ್ಲಿ ಕಲೆಯನ್ನು ನೋಡುತ್ತಾ ಬಣ್ಣ ಹಚ್ಚುತ್ತಾ ಕುಣಿಯುತ್ತಾ ಆರಾಧಿಸುತ್ತಾ ಬರುತ್ತಿದ್ದೇವೆ. ಇತ್ತೀಚೀನ ದಿನಗಳಲ್ಲಿ ಕಲೆಯನ್ನು ಯಕ್ಷಗಾನ ಮಂದಿರಗಳನ್ನು ಉಳಿಸಲು ಕಲಾ ಪೋಷಕರು ಹಾಗೂ ಸಂಘ ಸಂಸ್ಥೆಗಳ ಸಹಯೋಗ ಅವಶ್ಯಕ
ಶಂಕರಪ್ಪ ಅಂಚೆಕೊಪ್ಪಲು ಖಜಾಂಚಿ ಮೂಡಲಪಾಯ ಯಕ್ಷಗಾನ ಟ್ರಸ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.