ADVERTISEMENT

ಚಿಕ್ಕನಾಯಕನಹಳ್ಳಿ: 5 ತಿಂಗಳಾದರೂ ಬಾರದ ರಾಗಿ ಹಣ

ನಾಫೆಡ್‌ ರಾಗಿ ಖರೀದಿ ಕೇಂದ್ರದ ಬಳಿ ಕಾದು ನಿಂತ ರೈತರು: ತಾಂತ್ರಿಕ ತೊಡಕಿನ ಕಾರಣ ಹೇಳುವ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 25 ಮೇ 2024, 15:44 IST
Last Updated 25 ಮೇ 2024, 15:44 IST
ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ತೂಕ ಹಾಕುವ ಸ್ಥಳ
ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ತೂಕ ಹಾಕುವ ಸ್ಥಳ   

ಚಿಕ್ಕನಾಯಕನಹಳ್ಳಿ: ಪಟ್ಟಣದ ಕೃಷಿ ಉತ್ಪನ್ನ ಉಪ-ಮಾರುಕಟ್ಟೆ ಪ್ರಾಂಗಣದಲ್ಲಿರುವ ನಾಫೆಡ್‌ ರಾಗಿ ಖರೀದಿ ಕೇಂದ್ರದ ಬಳಿ ಶನಿವಾರ ಕೆಲ ರೈತರು ಕೈ-ಕಟ್ಟಿಕೊಂಡು ನಿಂತಿದ್ದರು. ಯಾಕೆ ಎಂದು ಪ್ರಶ್ನಿಸಿದರೆ ‘ನಾಫೆಡ್‌ ಖರೀದಿ ಕೇಂದ್ರಕ್ಕೆ ಮಾರಿದ್ದ ರಾಗಿ ಹಣ ಇನ್ನೂ ಖಾತೆಗೆ ಬಂದಿಲ್ಲ’ ಎಂದು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

ಐದು ತಿಂಗಳ ಹಿಂದೆ ನಾಫೆಡ್‌ ಕೇಂದ್ರಕ್ಕೆ ರಾಗಿ ಮಾರಿರುವ ವೋಚರ್ ಇರುವುದನ್ನು ತೋರಿಸಿದ ರೈತರು, ಇನ್ನೂ ಹಣ ಜಮೆಯಾಗಿಲ್ಲ. ಬಿತ್ತನೆ ಬೀಜ, ಗೊಬ್ಬರ ಖರೀದಿಗೆ ತೊಂದರೆಯಾಗುತ್ತಿದೆ ಎಂದು ವಿವರಿಸಿದರು.

ಕೃಷಿ ಚಟುವಟಿಕೆಗಳಿಗೆ, ಮಕ್ಕಳ ಶಿಕ್ಷಣಕ್ಕೆ, ನಿತ್ಯದ ಬದುಕಿಗೂ ತೊಂದರೆಯಾಗುತ್ತಿದೆ ಎಂದು ರಾಮನಿಂಗನಪಾಳ್ಯದ‌ ರೈತ ಮಳಸಿದ್ಧಪ್ಪ ಅಳಲು ತೋಡಿಕೊಂಡರು.

ADVERTISEMENT

ಮತಿಘಟ್ಟದ ಪ್ರಮೋದ, ಕಾಮಲಾಪುರ ಮಹೇಶ, ಕೈ-ಮರದ‌ ಅನಂತ, ಕಾನಕೆರೆ ರಮೇಶ ಹಾಗೂ ಕೆಂಗಳಾಪುರದ ಪಾಂಡಣ್ಣ ಸಹ ರಾಗಿ ಮಾರಾಟದ ಹಣ ಬಂದಿಲ್ಲ ಎಂದು ವೋಚರ್‌ಗಳನ್ನು ಪ್ರದರ್ಶಿಸಿದರು.

ನಾಫೆಡ್‌ ಖರೀದಿ ಕೇಂದ್ರದ ಅಧಿಕಾರಿಗಳ ಸಬೂಬು ಕೇಳಿ ಸುಸ್ತಾಗಿದೆ. ಚುನಾವಣೆ, ನೀತಿ ಸಂಹಿತೆ ಹಾಗೂ ಮತ್ತಿತರೆ ತಾಂತ್ರಿಕ ತೊಡಕಿನ ಕಾರಣಗಳನ್ನೇ ಹೇಳಿ ಸಮಜಾಯಿಷಿ ನೀಡುತ್ತಿದ್ದಾರೆ ಎಂದು ದೂರಿದರು.

ಕೊಬ್ಬರಿ ಖರೀದಿ ಬಿರುಸು

ಚಿಕ್ಕನಾಯಕನಹಳ್ಳಿ ಉಪ-ಮಾರುಕಟ್ಟೆಯ ನಾಫೆಡ್ ಕೇಂದ್ರದಲ್ಲಿ ಕೊಬ್ಬರಿ ಖರೀದಿ ಬಿರುಸಾಗಿದೆ. ಶನಿವಾರ ಸಂಜೆ ಹೊತ್ತಿಗೆ 221 ಟನ್ ಕೊಬ್ಬರಿ ಖರೀದಿಸಲಾಗಿದೆ. ತಾಲ್ಲೂಕಿನ ರೈತರು ತಮ್ಮ ಟ್ರ್ಯಾಕ್ಟರ್‌ ಹಾಗೂ ಸರಕು ಸಾಗಣೆ ವಾಹನಗಳಲ್ಲಿ ಕೊಬ್ಬರಿ ಚೀಲಗಳನ್ನು ತುಂಬಿಕೊಂಡು ನಾಫೆಡ್ ಕೇಂದ್ರದತ್ತ ಬರುತ್ತಿದ್ದಾರೆ. ಕೊಬ್ಬರಿ ಖರೀದಿ ನಿರಾತಂಕವಾಗಿ ನಡೆದಿದೆ.

ರಾಗಿ ದುಡ್ಡು ಬಾರದೆ ಕಷ್ಟದಲ್ಲಿರುವ ರೈತರು
ನ್ಯಾಫೆಡ್ ವೋಚರ್ರು
ಸೇಮ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.