ಶಿರಾ: ನಗರದ ಪ್ರವಾಸಿಮಂದಿರ ವೃತ್ತದ ಬಳಿಯ ತಾಲ್ಲೂಕು ಪಂಚಾಯಿತಿ ಕಟ್ಟಡದಲ್ಲಿರುವ ನಾಗೇಶ್ ಹೋಟೆಲ್ ಕಡಿಮೆ ಬಜೆಟ್‌ನಲ್ಲಿ ಹೊಟ್ಟೆ ತುಂಬಾ ಊಟ ನೀಡುವ ಮೂಲಕ ಆಹಾರ ಪ್ರಿಯರ ನೆಚ್ಚಿನ ತಾಣವಾಗಿದೆ.
ಈ ಹೋಟೆಲ್ ಮನೆ ಊಟ ನೆನಪಿಸುತ್ತದೆ. ಇಲ್ಲಿ ಯಾವುದೇ ನಾಮಫಲಕ ಹಾಕಿಲ್ಲ, ನಾಗೇಶ್ ಹೋಟೆಲ್ ಎಂದೇ ಪ್ರಸಿದ್ಧಿ ಪಡೆದಿದೆ. ಸುಮಾರು 22 ವರ್ಷಗಳಿಂದ ಹಸಿದವರಿಗೆ ಹೊಟ್ಟೆ ತುಂಬಾ ಊಟ ನೀಡುವ ಸ್ಥಳವಾಗಿದೆ. ಬೆಳಗ್ಗೆ ತಿಂಡಿಗೆ ಇಡ್ಲಿ, ಚಿತ್ರಾನ್ನ, ಪಲಾವ್, ಪುಳಿಯೋಗರೆ, ಬೊಂಡ ಸಿಗುತ್ತದೆ. ಶನಿವಾರ ಇವುಗಳ ಜತೆಗೆ ಉಪ್ಪಿಟ್ಟು, ಕೇಸರಿ ಬಾತ್ ದೊರೆಯಲಿದೆ.
ಮಧ್ಯಾಹ್ನದ ಊಟಕ್ಕೆ ಮುದ್ದೆ, ಚಪಾತಿ, ಸಾಗು, ಪಲ್ಯ, ಕಾಳು ಸಾರು, ರಸಂ, ಮಜ್ಜಿಗೆ ಸಾಮಾನ್ಯ. ಮನೆಯಲ್ಲಿ ಮಾಡುವಂತೆ ಬಸ್ಸಾರು, ಮಸೊಪ್ಪು, ಕಾಳಿನ ಹುಳಿ, ಮೊಳಕೆ ಕಾಳಿನ ಸಾರು, ಬೇಳೆ, ತರಕಾರಿ ಹುಳಿ ಸೇರಿದಂತೆ ಪ್ರತಿನಿತ್ಯ ಒಂದೊಂದು ಬಗೆಯ ಸಾರು ಮಾಡುತ್ತಿದ್ದಾರೆ. ಮುದ್ದೆ ಊಟಕ್ಕೆ ಹೆಚ್ಚು ಬೇಡಿಕೆ ಇದೆ. ಬಡವರು, ಕೂಲಿ ಕಾರ್ಮಿಕರು, ವಕೀಲರು, ಸರ್ಕಾರಿ ನೌಕರರು, ಮಧ್ಯಮ ವರ್ಗದವರು ಎಲ್ಲರೂ ಭೇಟಿ ನೀಡುತ್ತಾರೆ.
ಹೋಟೆಲ್ ಮಾಲೀಕ ನಾಗೇಶ್ ಕುಟುಂಬ ಸುಮಾರು 50 ವರ್ಷಗಳಿಂದ ಈ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಅವರ ತಂದೆ ಬಸವಲಿಂಗಯ್ಯ ಸುಮಾರು 25 ವರ್ಷ ಪ್ರವಾಸಿ ಮಂದಿರ ವೃತ್ತದಲ್ಲಿ ಗುಡಿಸಲಿನಲ್ಲಿ ಕಾಫಿ, ಚಹಾ ಹೋಟೆಲ್ ನಡೆಸುತ್ತಿದ್ದರು. ಅದನ್ನೇ ಮೇಲ್ದರ್ಜೆಗೆ ಏರಿಸಿ ತಿಂಡಿ, ಊಟ ಪ್ರಾರಂಭಿಸಿದ್ದಾರೆ.
ಹೋಟೆಲ್‌ನಲ್ಲಿ ಶುಚಿ, ರುಚಿಗೆ ಆದ್ಯತೆ ನೀಡಿರುವುದರ ಜತೆಗೆ ನಗು ಮುಖದಿಂದ ಗ್ರಾಹಕರನ್ನು ಮಾತನಾಡಿಸುತ್ತಾರೆ. ಕಾಯಂ ಗ್ರಾಹಕರನ್ನು ಹೊಂದಿರುವುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.