ADVERTISEMENT

ರಾಷ್ಟ್ರ ಜಾಗೃತಿ ಅಭಿಯಾನಕ್ಕೆ ತೆರೆ

ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2024, 5:27 IST
Last Updated 12 ಫೆಬ್ರುವರಿ 2024, 5:27 IST
   

ತುಮಕೂರು: ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ರಾಷ್ಟ್ರ ಜಾಗೃತಿ ಅಭಿಯಾನಕ್ಕೆ ಭಾನುವಾರ ತೆರೆ ಬಿತ್ತು.

ರಾಷ್ಟ್ರೀಯ ಮಾನವ–ಪರಿಸರ ಸಂರಕ್ಷಣಾ ಪಡೆಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯಮಟ್ಟದ ಸಾಂಸ್ಕೃತಿಕ ಜಾನಪದ ಕಲಾ ತಂಡಗಳ, ದೇಶಭಕ್ತಿ ಗೀತೆಗಳ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಎರಡು ಸ್ಪರ್ಧೆಗಳಿಗೆ ತಲಾ 18 ತಂಡಗಳು ನೋಂದಣಿ ಮಾಡಿಕೊಂಡಿದ್ದವು. ರಸಸಂಜೆ, ಜಾನಪದ ಜಾತ್ರೆ, ಜೋಡೆತ್ತುಗಳ ಸ್ಪರ್ಧೆ ಆಯೋಜಿಸಲಾಗಿತ್ತು.

ಅಂಕಣಕಾರ ಆದರ್ಶ ಗೋಖಲೆ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ರಾಷ್ಟ್ರಾಭಿಮಾನ ಬಿತ್ತುವ ಕೆಲಸವಾಗಬೇಕು. ಬ್ರಿಟೀಷರ ವಶದಲ್ಲಿದ್ದ ಭಾರತಕ್ಕೆ ಸಾವಿರಾರು ಹೋರಾಟಗಾರರು ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಹೋರಾಟಗಾರರ ಬದುಕು ಆದರ್ಶವಾಗಬೇಕು ಎಂದರು.

ADVERTISEMENT

ಯುವ ಸಮೂಹ ದೇಶಭಕ್ತಿ, ದೇಶದ ರಕ್ಷಣೆಯ ವಿಷಯದಲ್ಲಿ ಸದಾ ಮುಂದಿರಬೇಕು. ದೇಶಕ್ಕೆ ಸಮಸ್ಯೆ ಎದುರಾದಾಗ ನನ್ನ ದೇಶ ಎನ್ನುವ ಜಾಗೃತಿ ಮೂಡಬೇಕು. ಇಲ್ಲದಿದ್ದರೆ ನಮ್ಮ ಗುರುತು ಕೇವಲ ಆಧಾರ್ ಕಾರ್ಡ್‌ಗೆ ಸೀಮಿತವಾಗುತ್ತದೆ. ದೇಶದ ರಕ್ಷಣೆ ಕೇವಲ ಸೈನಿಕರಿಗೆ ಸೀಮಿತವಲ್ಲ. ನಮ್ಮೆಲ್ಲರ ಮೇಲೆಯೂ ಇದೆ. ಹಾಗಾಗಿ ನಾವು ದೇಶದ ಬಗ್ಗೆ ಜಾಗೃತರಾಗಬೇಕು ಎಂದು ಹೇಳಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್‌, ರಾಷ್ಟ್ರೀಯ ಮಾನವ–ಪರಿಸರ ಸಂರಕ್ಷಣಾ ಪಡೆಯ ಅಧ್ಯಕ್ಷ ಜಿ.ಎಸ್.ಬಸವರಾಜು, ರಾಷ್ಟ್ರೀಯ ಜಾಗೃತಿ ಅಭಿಯಾನದ ಅಧ್ಯಕ್ಷ ಎಸ್.ಪಿ.ಚಿದಾನಂದ್, ಗೌರವಾಧ್ಯಕ್ಷ ಕೋರಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕೆ.ಪರುಶುರಾಮಯ್ಯ, ಸಂಯೋಜಕರಾದ ಗೋವಿಂದರಾವ್, ಕೆ.ಶಂಕರ್, ಖಜಾಂಚಿ ಈಶ್ವರಗುಪ್ತ, ಮುಖಂಡರಾದ ಪರಶುರಾಮ್‌, ಬಿಂದುಶ್ರೀ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.