ತುಮಕೂರು: ‘ಅಲೆಮಾರಿ ಸಮುದಾಯಗಳಿಗೆ ಅಗತ್ಯ ಸೌಲಭ್ಯ ಒದಗಿಸಲು ವಿಫಲವಾಗಿರುವ ಜನಪ್ರತಿನಿಧಿಗಳ ವಿರುದ್ಧ ಮತ ಚಲಾಯಿಸುವಂತೆ ಕರೆ ನೀಡಲಾಗಿದೆ’ ಎಂದು ಎಸ್.ಸಿ, ಎಸ್.ಟಿ ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸ್ವಾಮಿ ಇಲ್ಲಿ ಮಂಗಳವಾರ ಹೇಳಿದರು.
ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಅಲೆಮಾರಿ ಸಮುದಾಯಗಳು ಇಂದಿಗೂ ಸಂಕಷ್ಟದಲ್ಲಿವೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಅಲೆಮಾರಿಗಳು ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾಗ ಪರ್ಯಾಯ ಜಾಗ ಗುರುತಿಸುವುದಾಗಿ ಭರವಸೆ ನೀಡಿದ್ದರು. ಅದು ಇದುವರೆಗೂ ಈಡೇರಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ, ‘ಎಲ್ಲ ರಾಷ್ಟ್ರೀಯ ಪಕ್ಷಗಳು ಬಲಿಷ್ಠ ಸಮುದಾಯಗಳನ್ನು ಓಲೈಸಲು ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಕ್ಕೆ ಅನ್ಯಾಯ ಮಾಡಿವೆ. ಅಲೆಮಾರಿ ಸಮುದಾಯಗಳನ್ನು ರಾಜಕೀಯ ಅಧಿಕಾರದಿಂದ ದೂರ ಇಡಲಾಗುತ್ತಿದೆ’ ಎಂದರು.
ಮಹಾಸಭಾ ಕಾರ್ಯಾಧ್ಯಕ್ಷ ಆದರ್ಶ್ ಚಿನ್ನಯಲ್ಲಪ್ಪ, ‘ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಮೀಸಲಾತಿ ಹಂಚಿಕೆ ಮಾಡಿದ್ದಾರೆ. ಕೇವಲ 5 ಬಲಾಢ್ಯ ಜಾತಿಗಳಿಗೆ ಮಣೆ ಹಾಕಿ, ಉಳಿದ 147 ಜಾತಿಗಳನ್ನು ನಿರ್ಲಕ್ಷಿಸಿ, ಸಾಮಾಜಿಕ ನ್ಯಾಯದ ಕಗ್ಗೊಲೆ ಮಾಡಲಾಗಿದೆ’ ಎಂದು ತಿಳಿಸಿದರು.
ಮುಖಂಡರಾದ ಮಹದೇವಯ್ಯ, ಅಮಲಾಪುರ ಕೇಶವ್, ದಯಾನಂದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.