ತಿಪಟೂರು: ನಗರದಲ್ಲಿನ ಬಹುತೇಕ ರಸ್ತೆಗಳಲ್ಲಿ ಯುಜಿಡಿ ಮ್ಯಾನ್‌ಹೋಲ್ ಮುಚ್ಚಳ ಒಡೆದು ಹೋಗಿದ್ದು, ಬಾಯಿ ತೆರೆದುಕೊಂಡಿವೆ.
ನಗರಸಭೆಯಿಂದ ಎರಡು ಹಂತಗಳಲ್ಲಿ ಯುಜಿಡಿ ಕಾಮಗಾರಿ ನೆಡೆದಿದ್ದು, ಮೊದಲ ಹಂತದಲ್ಲಿ 45 ಕಿ.ಮೀ, ಎರಡನೇ ಹಂತದಲ್ಲಿ 78 ಕಿ.ಮೀ ಒಟ್ಟು 123 ಕಿ.ಮೀ ಯುಜಿಡಿ ಕಾಮಗಾರಿ ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ ₹18 ಕೋಟಿ, ಎರಡನೇ ಹಂತದಲ್ಲಿ ₹24 ಕೋಟಿ ವೆಚ್ಚವಾಗಿದೆ. ಘನತ್ಯಾಜ್ಯ ನೀರು ನಿರ್ವಹಣೆಗಾಗಿ ₹20 ಕೋಟಿ ವಿನಿಯೋಗಿಸಲಾಗಿದ್ದು, ಈ ಕಾಮಗಾರಿ ನಿರ್ವಹಣೆ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ನೀರು ಸರಬರಾಜು ಮಂಡಳಿ ಜವಾಬ್ದಾರಿಯಾಗಿದೆ.
ನಗರಸಭೆ ಮಾಹಿತಿ ಪ್ರಕಾರ 123 ಕೀ.ಮೀ ಉದ್ದದ ಯುಜಿಡಿ ಪೈಪ್ ಅಳವಡಿಕೆಯಲ್ಲಿ 31 ವಾರ್ಡ್‌ಗಳು ಸೇರಿದಂತೆ ಒಟ್ಟು 4,578 ಮ್ಯಾನ್‌ಹೋಲ್ ಅಳವಡಿಸಲಾಗಿದೆ. ಆದರೆ ನಗರದಲ್ಲಿ 50ರಿಂದ 60ಕ್ಕೂ ಹೆಚ್ಚು ಮ್ಯಾನ್‌ಹೋಲ್‌ಗಳು ಈಗಾಗಲೇ ಒಡೆದು ಹೋಗಿವೆ. ಮುಚ್ಚಳ ಕಿತ್ತು ಹೋಗಿ, ಕಬ್ಬಿಣದ ಸಲಾಕೆಗಳು ಮೇಲೆ ಬಂದಿವೆ.
ನಗರದ ನೇತಾಜಿ ಪತ್ತಿನ ಸಹಕಾರ ಸಂಘದ ರಸ್ತೆ, ಶಂಕರ ನಗರ, ಬಸವೇಶ್ವರ ನಗರ, ಹಳೇಪಾಳ್ಯ, ಅಣ್ಣಾಪುರ, ಗಾಂಧೀನಗರ, ಮಾರನಗೆರೆ, ಕುವೆಂಪು ನಗರ, ರಾಘವೇಂದ್ರ ನಗರ, ಕೋಟೆ ಅಂಜನೇಯ ಸ್ವಾಮಿ ದೇವಾಲಯದ ಬಳಿ, ರಂಗಾಪುರ ರಸ್ತೆಯಲ್ಲಿರುವ ಮ್ಯಾನ್‌ಹೋಲ್ ಮುಚ್ಚಳ ಒಡೆದು ಬಾಯಿ ತೆರದುಕೊಂಡಿದ್ದು, ಕೂಡಲೇ ನಗರಸಭೆ ದುರಸ್ತಿ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ರಸ್ತೆಯಲ್ಲಿ ಹೆಚ್ಚಿನ ವಾಹನ ಸವಾರರು ಓಡಾಡುತ್ತಿದ್ದು ದ್ವಿಚಕ್ರ, ಆಟೋಗಳು ಅಪಾರ ಸಂಖ್ಯೆಯಲ್ಲಿ ಓಡಾಡುತ್ತವೆ. ಆದರೆ ರಸ್ತೆಯಲ್ಲಿ ಯುಜಿಡಿ ಗುಂಡಿ ಬಾಯ್ತೆರೆದು ಬಲಿಗಾಗಿ ಕಾಯುತ್ತಿದ್ದು, ಸರ್ಕಸ್ ಮಾಡಿಕೊಂಡು ಓಡಾಡುವಂತಾಗಿದೆ. ಮಳೆ ಬಂದರೆ ಗುಂಡಿ ಮೇಲೆ ನೀರು ತುಂಬಿಕೊಳ್ಳುವುದರಿಂದ ಗುಂಡಿ ಎಲ್ಲಿದೆ ಎನ್ನುವುದು ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಕಾಣದಾಗುತ್ತದೆ. ನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಿವೆ. ಕೂಡಲೇ ನಗರಸಭೆ ಗಮನಹರಿಸಿ ಮ್ಯಾನ್‌ಹೋಲ್ ದುರಸ್ತಿಪಡಿಸಿ ಹೊಸ ಮುಚ್ಚಳ ಹಾಕಿಸಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ನಗರಸಭೆ ಅಧಿಕಾರಿಗಳ ಜೊತೆ ಚರ್ಚಿಸಿ ಶೀಘ್ರ ಒಡೆದು ಹೋಗಿರುವ ಮ್ಯಾನ್‌ಹೋಲ್ ಮುಚ್ಚಳವನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು.ಯಮುನಾ ಧರಣೇಶ್, ನಗರಸಬೆ ಅಧ್ಯಕ್ಷೆ
ಮ್ಯಾನ್‌ಹೋಲ್ ಮುಚ್ಚಳ ಒಡೆದು ಹೋಗಿರುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ₹10 ಲಕ್ಷದ ಕ್ರೀಯಾಯೋಜನೆ ತಯಾರಿಸಿ, ಟೆಂಡರ್ ಕರೆದು ರಸ್ತೆ ಅನುಗುಣ ದುರಸ್ತಿ ಮಾಡಲಾಗುವುದುರಂಗಸ್ವಾಮಿ, ನಗರಸಭೆ ಎಇಇ
ರಸ್ತೆಗಳಲ್ಲಿ ವಾಹನ ಸಂಚಾರ ಮಾಡುವಾಗ ವಾಹನಗಳು ಮಿತಿ ಮೀರಿ ಸರಕು ಸಾಮಗ್ರಿ ತುಂಬಿದಾಗ ಓವರ್ ಲೋಡ್‌ಗಳಿಂದ ಮುಚ್ಚಳಗಳು ಒಡೆದು ಹೋಗುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಹರಿಸಿದಾಗ ಅನಾಹುತಗಳು ತಪ್ಪುತ್ತವೆ.ಬಸವರಾಜು, ನಿವೃತ್ತ ಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.