ತುಮಕೂರು: ನಗರದ ರೈಲು ನಿಲ್ದಾಣದಿಂದ ಮುಂದಿನ ಹದಿನೈದು ದಿನದಲ್ಲಿ ಹೊಸದಾಗಿ ಮೆಮು ರೈಲು ಸಂಚಾರ ಆರಂಭವಾಗಲಿದೆ ಎಂದು ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಇಲ್ಲಿ ಭಾನುವಾರ ತಿಳಿಸಿದರು.
‘ರಾಜ್ಯದಲ್ಲಿ ಹೊಸದಾಗಿ ಮೂರು ಮೆಮು ರೈಲು ಆರಂಭವಾಗಲಿದ್ದು, ಇದರಲ್ಲಿ ಒಂದು ತುಮಕೂರು ನಿಲ್ದಾಣದಿಂದ ಶುರುವಾಗಲಿದೆ. ನಗರದಿಂದ ಬೆಳಗ್ಗೆ 9 ಗಂಟೆಗೆ ಹೊರಟು 10ಕ್ಕೆ ಬೆಂಗಳೂರಿನ ಯಶವಂತಪುರ ನಿಲ್ದಾಣ ತಲುಪಲಿದೆ. ಸಂಜೆ 6 ಗಂಟೆಗೆ ಯಶವಂತಪುರದಿಂದ ಹೊರಟು ಸಂಜೆ 7 ಗಂಟೆಗೆ ನಗರಕ್ಕೆ ಬರಲಿದೆ. ಇದರಲ್ಲಿ 1,500 ಜನ ಪ್ರಯಾಣಿಸಬಹುದು’ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರೈಲ್ವೆ ಮಾರ್ಗದ ಸಾಮರ್ಥ್ಯ ಹೆಚ್ಚಿಸಲು ಬೆಂಗಳೂರು–ತುಮಕೂರು–ಅರಸಿಕೆರೆ ಮಾರ್ಗದಲ್ಲಿ ₹220 ಕೋಟಿ ವೆಚ್ಚದಲ್ಲಿ ಆಟೋಮೆಟಿಕ್ ರೈಲ್ವೆ ಸಿಗ್ನಲ್ ಅಳವಡಿಸುವ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಬೆಂಗಳೂರು–ತುಮಕೂರು ಭಾಗದ ಮುಂದಿನ 30 ವರ್ಷಗಳ ಬೆಳವಣಿಗೆ ದೃಷ್ಟಿಯಲ್ಲಿ ಇಟ್ಟುಕೊಂಡು ಯೋಜನೆ ರೂಪಿಸಲಾಗಿದೆ. ಇದರಿಂದ ರೈಲುಗಳ ಓಡಾಟ ಸುಲಭವಾಗುತ್ತದೆ ಎಂದರು.
ಅಮೃತ್ ಭಾರತ್ ಯೋಜನೆಯಡಿ ರಾಜ್ಯದ 61 ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ನಗರದ ನಿಲ್ದಾಣಕ್ಕೆ ₹118 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈಗಾಗಲೇ ಗುಬ್ಬಿ ನಿಲ್ದಾಣದ ಆಧುನೀಕರಣಕ್ಕೆ ₹7.50 ಕೋಟಿ, ಹಾಸನದ ಶ್ರವಣಬೆಳಗೊಳ ನಿಲ್ದಾಣಕ್ಕೆ ₹9 ಕೋಟಿ ಬಿಡುಗಡೆ ಮಾಡಲಾಗಿದೆ. ಗುಬ್ಬಿ ತಾಲ್ಲೂಕಿನ ದೊಡ್ಡಗುಣಿ ಹತ್ತಿರ ಸ್ಕೈವಾಕ್ ನಿರ್ಮಾಣ ಕಾರ್ಯ ಒಂದು ತಿಂಗಳಲ್ಲಿ ಆರಂಭವಾಗಲಿದೆ ಎಂದು ಹೇಳಿದರು.
ನಗರದ ರೈಲು ನಿಲ್ದಾಣಕ್ಕೆ ‘ಶಿವಕುಮಾರ ಸ್ವಾಮೀಜಿ’ ಹೆಸರು, ಕ್ಯಾತ್ಸಂದ್ರ ನಿಲ್ದಾಣಕ್ಕೆ ‘ಸಿದ್ಧಗಂಗಾ ಮಠ’ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಜಿಲ್ಲೆಯ ಹಲವಾರು ಸಂಘ–ಸಂಸ್ಥೆಗಳು ಒತ್ತಾಯಿಸಿವೆ. ಈ ಕುರಿತು ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಕಾರ್ಯದರ್ಶಿ ಅವರಲ್ಲಿ ಮನವಿ ಮಾಡಲಾಗಿದೆ ಎಂದರು.
ನಾಫೆಡ್ ಕೇಂದ್ರದಿಂದ ಉಂಡೆ ಕೊಬ್ಬರಿ ಖರೀದಿಸಿದ ನಂತರ ₹691 ಕೋಟಿ ಹಣ ಬಾಕಿ ಉಳಿಸಿಕೊಂಡಿದ್ದು, ಮುಂದಿನ ಮೂರು ದಿನಗಳಲ್ಲಿ ಈ ಹಣ ಬಿಡುಗಡೆಯಾಗಲಿದೆ. ಇದರ ಕುರಿತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಜತೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಬಿ.ಸಿ.ನಾಗೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹಾಜರಿದ್ದರು.
24ರಿಂದ ‘ವಂದೇ ಭಾರತ್’ ನಿಲುಗಡೆ
ಆ.24ರಿಂದ ನಗರದ ರೈಲು ನಿಲ್ದಾಣದಲ್ಲಿ ಪ್ರತಿ ದಿನ ವಂದೇ ಭಾರತ್ ರೈಲು ನಿಲ್ಲಲಿದೆ. ಜನರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗಿನ ಜಾವ 5 ಗಂಟೆ ಮತ್ತು ಸಂಜೆ 6.30ರ ಸಮಯದಲ್ಲಿ ರೈಲು ನಿಲ್ಲಿಸಲಾಗುತ್ತದೆ. ಜಿಲ್ಲೆಯ ಜನರು ಇದರ ಪ್ರಯೋಜನ ಪಡೆಯಬಹುದು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು. ಪ್ರಯಾಣಿಕರ ಸುಗಮ ಸಂಚಾರ ರೈಲ್ವೆ ಸುರಕ್ಷತೆಯ ದೃಷ್ಟಿಯಿಂದ ₹350 ಕೋಟಿ ವೆಚ್ಚದಲ್ಲಿ ನಗರದ 5 ಕಡೆಗಳಲ್ಲಿ ಸೇತುವೆ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ. ತುಮಕೂರು–ರಾಯದುರ್ಗ ರೈಲ್ವೆ ಯೋಜನೆ ಕಾಮಗಾರಿ 2026 ಡಿಸೆಂಬರ್ ಅಥವಾ 2027 ಮಾರ್ಚ್ ಒಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.