ತುಮಕೂರು: ತುತ್ತಿನ ಚೀಲ ತುಂಬಿಸಿಕೊಳ್ಳಲು ಊರು ಬಿಟ್ಟು ವಲಸೆ ಬಂದ ಕಾರ್ಮಿಕರ ಬದುಕಿಗೆ ಭದ್ರತೆ ಇಲ್ಲದಂತಾಗಿದೆ. ಜೀವನವೇ ಅತಂತ್ರವಾಗಿದೆ. ನಗರದಲ್ಲಿ ಖಾಲಿ ಜಾಗಕ್ಕೂ ಬಾಡಿಗೆ ಕೊಡಬೇಕಿದ್ದು, ಕಾರ್ಮಿಕರು ಗುಡಿಸಲು ನಿರ್ಮಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಗುಡಿಸಲಿನಲ್ಲಿ ವಾಸವಿರಲು ಜಾಗದ ಮಾಲೀಕರಿಗೆ ಪ್ರತಿ ತಿಂಗಳು ₹800 ಹಣ ಪಾವತಿಸುತ್ತಿದ್ದಾರೆ. ಮೂರು ಜನ ಮಲಗಲು ಆಗದಂತಹ ಮುರುಕಲು ಗುಡಿಸಲಿನಲ್ಲಿಯೇ ದಿನ ದೂಡುತ್ತಿದ್ದಾರೆ. ನಗರದ ರಿಂಗ್ ರಸ್ತೆ, ಶೆಟ್ಟಿಹಳ್ಳಿ, ಬಡ್ಡಿಹಳ್ಳಿ, ಮರಳೂರು ದಿಣ್ಣೆ, ರಾಜೀವ್‌ಗಾಂಧಿ ನಗರ, ಶೇಷಾದ್ರಿಪುರಂ ಕಾಲೇಜು ಮುಂಭಾಗ, ಜಯನಗರ ಒಳಗೊಂಡಂತೆ ವಿವಿಧ ಕಡೆಗಳಲ್ಲಿ ವಲಸೆ ಕಾರ್ಮಿಕರು ನೆಲೆ ಕಂಡುಕೊಂಡಿದ್ದಾರೆ.
ನಗರದ ಹೊರ ವಲಯದ ರಿಂಗ್ ರಸ್ತೆ, ಶೆಟ್ಟಿಹಳ್ಳಿ ಕಡೆಗೆ ಒಮ್ಮೆ ಕಣ್ಣಾಡಿಸಿದರೆ ಸಾಲು ಸಾಲು ಗುಡಿಸಲು ಕಾಣಸಿಗುತ್ತವೆ. ದೂರದಿಂದ ನೋಡಿದರೆ ಅಲ್ಲಿನ ನಿವಾಸಿಗಳ ಕಷ್ಟ ಯಾರ ಅರಿವಿಗೂ ಬರುವುದಿಲ್ಲ. ಒಮ್ಮೆ ಮಾತಿಗೆ ಇಳಿದರೆ, ಅಲ್ಲಿನ ಪರಿಸ್ಥಿತಿ ಅವಲೋಕಿಸಿದರೆ ಅವರ ಜೀವನ ಯಾರಿಗೂ ಬೇಡ ಎನ್ನಿಸುತ್ತದೆ.
ವಿದ್ಯುತ್ ಪೂರೈಕೆ ಇಲ್ಲದೆ ಕತ್ತಲಲ್ಲಿ ಕಾಲ ಕಳೆಯುವ ಜನ, ಸ್ವಚ್ಛತೆ ಮರೀಚಿಕೆಯಾದ ಜಾಗ. ಶುದ್ಧ ಕುಡಿಯುವ ನೀರಿನ ಸರಬರಾಜು ಇಲ್ಲ. ಸ್ನಾನಕ್ಕೂ ನೀರಿನ ಕೊರತೆ. ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಕಾರ್ಮಿಕರು ಬದುಕು ಸಾಗಿಸುತ್ತಿದ್ದಾರೆ. ಶಾಲೆಯಲ್ಲಿ ತಮ್ಮ ವಯಸ್ಸಿನವರ ಜತೆ ಆಟ ಆಡುತ್ತಾ ಇರಬೇಕಾಗಿದ್ದ ಮಕ್ಕಳು ಸಹ ಪೋಷಕರನ್ನು ಹಿಂಬಾಲಿಸಿಕೊಂಡು ಬಂದಿವೆ. ಅವರ ಆಟ–ಪಾಠ ಎಲ್ಲವೂ ಇಲ್ಲಿಯೇ.
ರಾಯಚೂರು, ಮಾನ್ವಿ, ಸಿಂಧನೂರು, ಯಾದಗಿರಿ, ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳ ನೂರಾರು ಮಂದಿ ನಗರಕ್ಕೆ ಗುಳೆ ಬಂದಿದ್ದಾರೆ. ಕಟ್ಟಡ ನಿರ್ಮಾಣ, ರಾಗಿ ಕಟಾವು, ಅಡಿಕೆ, ತೆಂಗಿನ ತೋಟದಲ್ಲಿ ಕೆಲಸಕ್ಕೆ ಹೋಗುತ್ತಾರೆ. ಕಳೆದ ವರ್ಷದಿಂದ ಜಿಲ್ಲೆಯಲ್ಲಿ ಸರಿಯಾದ ಮಳೆ ಇಲ್ಲದೆ ಕೃಷಿ ಕೆಲಸವೂ ಸಿಗುತ್ತಿಲ್ಲ. ಇದರಿಂದ ಹೆಚ್ಚಿನ ಕಾರ್ಮಿಕರು ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗುತ್ತಿದ್ದಾರೆ.
ಎಷ್ಟೇ ಕೆಲಸ ಮಾಡಿದರೂ ಕಾರ್ಮಿಕರ ಬದುಕು ಮಾತ್ರ ಸುಧಾರಣೆ ಕಂಡಿಲ್ಲ. ಹಲವು ವರ್ಷಗಳಿಂದ ನಗರದ ವಿವಿಧ ಕಡೆಗಳಲ್ಲಿ ಗುಡಿಸಲು ಹಾಕಿಕೊಂಡು ಬದುಕುತ್ತಿದ್ದಾರೆ. ಒಂದು ಶಾಶ್ವತ ನೆಲೆ ಕಲ್ಪಿಸಲು ಇದುವರೆಗೆ ಸಾಧ್ಯವಾಗಿಲ್ಲ. ಕನಿಷ್ಠ ಬಾಡಿಗೆಯಿಂದ ವಿನಾಯಿತಿ ನೀಡಲು ಆಗಿಲ್ಲ. ‘ವಲಸೆ ಕಾರ್ಮಿಕರ ವಿಷಯದಲ್ಲಿ ಕಾರ್ಮಿಕ ಇಲಾಖೆಯೂ ಮೂಕವಾಗಿದೆ. ಅವರಿಗೆ ಕನಿಷ್ಠ ಸೌಲಭ್ಯ ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ’ ಎಂಬುವುದು ಕಾರ್ಮಿಕ ಮುಖಂಡರ ಆರೋಪ.
‘ಹದಿನೈದು ವರ್ಷಗಳಿಂದ ಇಲ್ಲಿಯೇ ಇದ್ದೇವೆ. ನಮಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ರಾತ್ರಿಯಾದರೆ ಸೋಲಾರ್ ಬೆಳಕಿನಲ್ಲಿ ದಿನ ಕಳೆಯಬೇಕು. ಇದುವರೆಗೆ ಯಾರೊಬ್ಬರೂ ಇಲ್ಲಿಗೆ ಬಂದು ನಮ್ಮ ಕಷ್ಟ ಕೇಳಿಲ್ಲ. ಮಹಾನಗರ ಪಾಲಿಕೆ ನಿದ್ರೆಗೆ ಜಾರಿದೆ’ ಎಂದು ಸಿಂಧನೂರಿನ ವೀರೇಶ್ ಬೇಸರಿಸಿದರು.
‘ಮಳೆ ಬಂದಾಗ ಗುಡಿಸಲಿಗೆ ನೀರು ನುಗ್ಗುತ್ತದೆ. ಅಂತಹ ಸಮಯದಲ್ಲಿ ಇಡೀ ರಾತ್ರಿ ನಿದ್ದೆ ಇಲ್ಲದೆ ಕಳೆದಿದ್ದೇವೆ. ಹೆಚ್ಚಿನ ಮಳೆಯಾದಾಗ ಪಾಲಿಕೆ ಅಧಿಕಾರಿಗಳು ಬಂದು ಹೋಗುತ್ತಾರೆ. ಇದಾದ ಬಳಿಕ ಇತ್ತ ಯಾರೂ ಸುಳಿಯುವುದಿಲ್ಲ. ಕುಡಿಯುವ ನೀರಿಗೂ ತೊಂದರೆಯಾಗುತ್ತಿದೆ’ ಎಂದು ರಾಯಚೂರು ಜಿಲ್ಲೆಯ ಮಾನ್ವಿಯ ನಿವಾಸಿ ಯಲ್ಲಪ್ಪ ತಮ್ಮ ಗುಡಿಸಲಿಗೆ ತಾಡಪಾಲು ಹೊದಿಸುತ್ತ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.