ಗುಬ್ಬಿ: ತಾಲ್ಲೂಕಿನ ಕಸಬಾ ಹೋಬಳಿ ಬಿ.ಪಾಳ್ಯ (ನಡುವಲ ಪಾಳ್ಯ)ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕಳೆದ 15 ದಿನಗಳಿಂದ ಬಿಸಿಯೂಟ ಇಲ್ಲದೆ ಪಾಠ ಕೇಳುತ್ತಿದ್ದಾರೆ.
ಗ್ರಾಮೀಣ ಭಾಗದಲ್ಲಿರುವ ಈ ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ ಒಟ್ಟು 143 ಮಕ್ಕಳು ಇದ್ದಾರೆ. ಕಳೆದ ದಸರ ರಜೆವರೆಗೂ ಸುವ್ಯವಸ್ಥಿತವಾಗಿ ನಡೆಯುತ್ತಿದ್ದ ಬಿಸಿಊಟ ರಜೆ ಕಳೆದ ನಂತರ ಬಿಸಿಊಟ ನೀಡಲಾಗುತ್ತಿಲ್ಲ.
ಅನುಕೂಲವಿರುವ ಮಕ್ಕಳು ಮನೆಯಿಂದ ಊಟದ ಡಬ್ಬಿಯನ್ನು ತರುತ್ತಾರೆ. ಹಾಲು, ಚಿಕ್ಕಿ, ಬಾಳೆಹಣ್ಣು, ಮೊಟ್ಟೆಯನ್ನೂ ವಿತರಿಸುತ್ತಿಲ್ಲ. ಅಡುಗೆಯವರು ಇಲ್ಲದಿರುವುದರಿಂದ ಏನೂ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಶಿಕ್ಷಕರು ಹೇಳುತ್ತಾರೆ ಎನ್ನುತ್ತಾರೆ ಶಾಲಾ ಮಕ್ಕಳು.
ಶಾಲೆಯಲ್ಲಿ ಇಬ್ಬರು ಅಡುಗೆ ತಯಾರಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ ಕಡಿಮೆ ಸಂಬಳ ಎಂದು ಒಬ್ಬ ಅಡುಗೆಯವರು ಬರಲು ನಿರಾಕರಿಸುತ್ತಿದ್ದಾರೆ.
ಕಡಿಮೆ ಸಂಬಳ ನೀಡುತ್ತಿರುವುದರಿಂದ ಸ್ಥಳೀಯವಾಗಿ ಯಾವುದೇ ಬಿಸಿಊಟ ತಯಾರಕರು ಬರುತ್ತಿಲ್ಲ ಎಂದು ಶಿಕ್ಷಕರು ಹೇಳುತ್ತಾರೆ.
ಶಾಲೆಯಲ್ಲಿ ಬಿಸಿಯೂಟ ತಯಾರಕರಿಗೆ ನೀಡುತ್ತಿರುವ ಗೌರವಧನ ಕಡಿಮೆಯಾಗಿದೆ. ಬೇರೆಡೆ ಕೂಲಿ ಕೆಲಸಕ್ಕೆ ಹೋದರೆ ಹೆಚ್ಚಿಗೆ ಹಣ ಸಿಗುತ್ತದೆ. ದುಡಿಮೆಯಿಂದಲೇ ಬದುಕು ಕಟ್ಟಿಕೊಳ್ಳಬೇಕಾಗಿರುವುದರಿಂದ ಬೇರೆಕಡೆ ಕೂಲಿಗೆ ಹೋಗುವುದರಲ್ಲಿ ತಪ್ಪೇನಿದೆ ಎನ್ನುತ್ತಾರೆ ಬಿಸಿಯೂಟ ತಯಾರಕರು.
ತುರ್ತುಕ್ರಮ ಕೈಗೊಳ್ಳಬೇಕಾಗಿದ್ದ ಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಎಸ್‌ಡಿಎಂಸಿ ಸದಸ್ಯರು ಯಾವುದೇ ಕ್ರಮಕೈಗೊಳ್ಳದೆ ಇರುವುದು ದುರಾದೃಷ್ಟಕರ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ದಸರಾ ರಜೆ ಮುಗಿದ ನಂತರ ರಜಾದಿನ ಹೊರತುಪಡಿಸಿ 11 ದಿನ ಶಾಲೆ ನಡೆದಿದೆ. ಅದರಲ್ಲಿ 6 ದಿನ ಬಿಸಿಯೂಟ ವಿತರಿಸಲಾಗಿದೆ. ಸ್ಥಳೀಯವಾಗಿ ಅಡುಗೆಯವರು ಲಭ್ಯವಿಲ್ಲದ ಕಾರಣ ಮಕ್ಕಳಿಗೆ ತೊಂದರೆಯಾಗಿದೆ. ತಕ್ಷಣ ಕ್ರಮಕೈಗೊಂಡು ಸೂಕ್ತ ವ್ಯವಸ್ಥೆ ಮಾಡುತ್ತೇವೆ ಎಂದು ಬಿಆರ್‌ಸಿ ಮಧುಸೂದನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.