ತುಮಕೂರು: ಕಳೆದ ಮೂರು ತಿಂಗಳಿನಿಂದ ವೇತನ ಸಿಗದೆ ಆರೋಗ್ಯ ಕವಚ ‘108’ ನೌಕರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬದುಕು ಸಾಗಿಸುವುದಕ್ಕೆ ಪರದಾಡುತ್ತಿದ್ದಾರೆ.
ಆಂಬುಲೆನ್ಸ್ ಚಾಲಕರು ಮತ್ತು ತುರ್ತು ವೈದ್ಯಕೀಯ ಚಿಕಿತ್ಸಕರು ಸೇರಿದಂತೆ ರಾಜ್ಯದಲ್ಲಿ ಸುಮಾರು 3 ಸಾವಿರ ಜನ ನೌಕರರು ಆರೋಗ್ಯ ಕವಚ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಹೊರ ಗುತ್ತಿಗೆ ಆಧಾರದಲ್ಲಿ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಕಳೆದ ಫೆಬ್ರುವರಿ ತಿಂಗಳ ಸಂಬಳ ಪಾವತಿಯಾಗಿದ್ದು ಬಿಟ್ಟರೆ, ಈವರೆಗೆ ವೇತನ ನೀಡಿಲ್ಲ.
ಜಿಲ್ಲೆಯಲ್ಲಿ 35 ಆಂಬುಲೆನ್ಸ್‌ಗಳಿದ್ದು, 145 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರು ತಿಂಗಳಿಂದ ಸಂಬಳ ಪಾವತಿಯಾಗದೆ, ಅವರಿಗೆ ದಿಕ್ಕು ತೋಚದಂತಾಗಿದೆ. ಮನೆಯ ಬಾಡಿಗೆ, ಮಕ್ಕಳ ಶಾಲಾ ಶುಲ್ಕ, ಕುಟುಂಬ ನಿರ್ವಹಣೆ ಮಾಡುವುದು ಹಲವರಿಗೆ ಸವಾಲಾಗಿದೆ. ಶುಲ್ಕ ಪಾವತಿಸಿ, ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಸಾಲದ ಮೊರೆ ಹೋಗುತ್ತಿದ್ದಾರೆ.
ಪ್ರಸ್ತುತ ಎಲ್ಲ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ತರಕಾರಿ, ಅಡುಗೆ ಅನಿಲ, ಎಣ್ಣೆ, ಬೇಳೆ ಅಗತ್ಯ ಪದಾರ್ಥಗಳು ಕೈಗೆಟಕುವ ದರದಲ್ಲಿ ಸಿಗುತ್ತಿಲ್ಲ. ಪ್ರತಿ ತಿಂಗಳು ಬರುವ ಸಂಬಳ ನಂಬಿ ಬದುಕುತ್ತಿರುವವರು ಅಕ್ಷರಶಃ ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಆರೋಗ್ಯ ಕವಚ ನೌಕರರು ತಮ್ಮ ವೇತನ ಬರುವುದು ಮತ್ತಷ್ಟು ತಡವಾಗಬಹುದು ಎಂಬ ಆತಂಕದಲ್ಲಿದ್ದಾರೆ. ಸಂಬಳ ಪಾವತಿ ಮಾಡುವ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ.
‘ದಿನದ 24 ಗಂಟೆಯೂ ಕೆಲಸದಲ್ಲಿ ತೊಡಗಿಸಿಕೊಳ್ಳುವ, ಜನರ ಕಷ್ಟಕ್ಕೆ ತುರ್ತಾಗಿ ಸ್ಪಂದಿಸುವ ನೌಕರರ ಬಗ್ಗೆ ಸರ್ಕಾರ ಗಮನ ಹರಿಸಿದಂತಿಲ್ಲ. ಪ್ರತಿ ಬಾರಿ ಇಂತಹ ಸಮಸ್ಯೆಯಾಗುತ್ತದೆ. ಎರಡು ಮೂರು ತಿಂಗಳಿಗೊಮ್ಮೆ ಸಂಬಳ ಪಾವತಿ ಮಾಡಲಾಗುತ್ತಿದೆ. ಸರ್ಕಾರ ಆರೋಗ್ಯ ಕವಚ ಸಿಬ್ಬಂದಿಯನ್ನು ತಾತ್ಸಾರ ಭಾವದಿಂದ ನೋಡುತ್ತಿದೆ’ ಎಂದು ಸಿಬ್ಬಂದಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.