ADVERTISEMENT

ಸಾರ್ವಜನಿಕ ಆಸ್ಪತ್ರೆಯಲ್ಲಿ ಸಹಜ ಹೆರಿಗೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 6 ಮೇ 2024, 4:24 IST
Last Updated 6 ಮೇ 2024, 4:24 IST
ಕುಣಿಗಲ್ ಸಾರ್ವಜನಿಕ ಆಸ್ಪತ್ರೆ
ಕುಣಿಗಲ್ ಸಾರ್ವಜನಿಕ ಆಸ್ಪತ್ರೆ   

ಕುಣಿಗಲ್: ಕಳೆದ ವರ್ಷ ಸಹಜ ಹೆರಿಗೆ ಪ್ರಕರಣಗಳಿಂದ ದೂರವಾಗಿದ್ದು, ಜನಪ್ರತಿನಿಧಿ ಮತ್ತು ಅಧಿಕಾರಿಗಳಿಂದ ತೀವ್ರ ಟೀಕೆಗೊಳಗಾಗಿದ್ದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಹಜ ಹೆರಿಗೆ ಪ್ರಕರಣ ಹೆಚ್ಚಾಗಿ ಪ್ರಶಂಸೆಗೆ ಪಾತ್ರವಾಗಿದೆ.

ಕಳೆದ ವರ್ಷ ಆಸ್ಪತ್ರೆಯಲ್ಲಿ 615 ಹೆರಿಗೆ ಪ್ರಕರಣ ದಾಖಲಾಗಿದ್ದು, 154 ಸಹಜ ಹೆರಿಗೆಗಳಾಗಿದ್ದು, 490 ಸಿಸೇರಿಯನ್ ಮೂಲಕ ಹೆರಿಗೆಗಳಾಗಿತ್ತು. ಜನಪ್ರತಿನಿಧಿಗಳಿಂದ ಮತ್ತು ನಾಗರಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದ್ದವು. ಜತೆಗೆ ಹಣದ ಒಪ್ಪಂದಗಳ ನಡುವೆ ಹೆರಿಗೆ ನಡೆಯುತ್ತಿದ್ದು, ವೈದ್ಯರೊಬ್ಬರು ಅಮಾನತಿಗೊಳಗಾದ ಘಟನೆಗೆ ಸಾಕ್ಷಿಯಾಗಿತ್ತು. ಸಾರ್ವಜನಿಕ ಆಸ್ಪತ್ರೆ ಬಗ್ಗೆ ಜಿಲ್ಲಾ ಮಟ್ಟದಲ್ಲೂ ಚರ್ಚೆಯಾಗಿ ಅಧಿಕಾರಿಗಳಿಂದಲೂ ಟೀಕಾಪ್ರಹಾರ ನಡೆದಿದ್ದವು.

ಪ್ರಸಕ್ತ ವರ್ಷದಲ್ಲಿ ಪ್ರಸೂತಿ, ಸ್ತ್ರೀರೋಗ ತಜ್ಞರು ಬದಲಾವಣೆಯಾಗಿದ್ದು, ಡಾ.ಅಭಿಜಿತ್ ಮತ್ತು ಡಾ.ಪಲ್ಲವಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಳೆದ ಮೂರು ತಿಂಗಳಲ್ಲಿ 256 ಹೆರಿಗೆ ಪ್ರಕರಣಗಳಲ್ಲಿ 85 ಸಹಜ ಹೆರಿಗೆಯಾಗಿದೆ. ಮಾರ್ಚ್‌ ತಿಂಗಳಲ್ಲಿ 96 ಹೆರಿಗೆಯಾಗಿದ್ದು, 46 ಸಹಜ ಹೆರಿಗೆಯಾಗಿದೆ. ಏಪ್ರಿಲ್ ತಿಂಗಳಲ್ಲಿಯೂ ಶೇ 45 ಸಹಜ ಹೆರಿಗೆ ದಾಖಲಾಗಿದೆ.

ADVERTISEMENT

ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುತ್ತಿರುವ ಸರ್ಕಾರಿ ಆಸ್ಪತ್ರೆಗೆ ಬರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಗರ್ಭಿಣಿಯರಿಗೆ ಸಕಾಲದಲ್ಲಿ ಪ್ರಯೋಗಾಲಯದ ವರದಿಗಳು ಮತ್ತು ಸ್ಕ್ಯಾನಿಂಗ್ ಮಾಡುವ ಮೂಲಕ ಸೂಕ್ತ ಮಾರ್ಗದರ್ಶನ ನೀಡುವ ಜತೆಗೆ ಔಷಧೋಪಚಾರ ನೀಡಲಾಗುತ್ತಿದೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ಇಬ್ಬರು ಪ್ರಸೂತಿ ತಜ್ಞರು ಮತ್ತು ಕೆಳಹಂತದ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಲಭ್ಯರಿರುತ್ತಾರೆ. ವ್ಯವಸ್ಥೆಯಲ್ಲಿ ಸುಧಾರಣೆಯಾಗುತ್ತಿದೆ ಎಂದು ಆಡಳಿತ ವೈದ್ಯಾಧಿಕಾರಿ ಗಣೇಶ್ ಬಾಬು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.