ತುಮಕೂರು: ಜಲ ಜೀವನ್ ಮಿಷನ್ ಯೋಜನೆಗೆ ಪೂರಕವಾಗುವ ಜಿಐಎಸ್ ಆಧಾರಿತ ನಕ್ಷೆ ಸಿದ್ಧಪಡಿಸಲು ತಂತ್ರಾಂಶ
ಅಭಿವೃದ್ಧಿಪಡಿಸಿ ಜಿಲ್ಲೆಯ ಸಂಪೂರ್ಣ ಮಾಹಿತಿಯನ್ನು ಅಪ್ಲೋಡ್ ಮಾಡುವಂತೆ ಸಂಸದ ಜಿ.ಎಸ್.ಬಸವರಾಜು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಲಜೀವನ್ ಮಿಷನ್ ಯೋಜನೆ ಮತ್ತು ‘ಊರಿಗೊಂದು ಕೆರೆ– ಆ ಕೆರೆಗೆ ನದಿ ನೀರು’ ಯೋಜನೆಗೆ ಪೂರಕವಾಗುವ ಜಿಐಎಸ್ ಆಧಾ
ರಿತ ನಕ್ಷೆ ಸಿದ್ಧಪಡಿಸುವ ಕುರಿತು ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದರು. ಗ್ರಾಮ ಪಂಚಾಯಿತಿ ಹಂತದಲ್ಲಿ ಎಲ್ಲಾ ಮಾಹಿತಿಯನ್ನೂ ಅಪ್‍ಲೋಡ್ ಮಾಡಬೇಕು ಎಂದು ಹೇಳಿದರು.
ಜಿಐಎಸ್ ಆಧಾರಿತ ನಕ್ಷೆ ಸಿದ್ಧಪಡಿಸಲು ಸಾಫ್ಟ್‌ವೇರ್‌ನಲ್ಲಿ ಗ್ರಾಮವಾರು ಪಾಸ್‍ವರ್ಡ್ ಸೃಜಿಸಿ, ಪ್ರತಿ ಗ್ರಾಮ ಪಂಚಾಯಿತಿಗೂ ಪಾಸ್‍ವರ್ಡ್ ನೀಡಿ ಎಲ್ಲಾ ಗ್ರಾಮದ ಮಾಹಿತಿ ಅಪ್‍ಲೋಡ್ ಮಾಡಬೇಕು ಎಂದು ತಿಳಿಸಿದರು.
ಜಲ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಪ್ರತಿ ಹಳ್ಳಿಗೂ ಕುಡಿಯುವ ನೀರು ಒದಗಿಸುವ ಕಾರ್ಯ ಸಂಪೂರ್ಣ ಯಶಸ್ವಿಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿ ಗ್ರಾಮಗಳಿಗೆ ಜಲ ಜೀವನ್ ಮಿಷನ್ ಯೋಜನೆ ಮೂಲಕ ನೀರು ಒದಗಿಸುವ ನಕ್ಷೆ ತಯಾರಿಸುವಂತೆ ನಿರ್ದೇಶಿಸಿದರು.
ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ‘ಜಿಐಎಸ್ ನಕ್ಷೆಯನ್ನು ತ್ವರಿತವಾಗಿ ಸಿದ್ಧಪಡಿಸಬೇಕು. ನೀರಿನ ಮೂಲ ಸೇರಿದಂತೆ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು. ಪ್ರತಿ ಗ್ರಾಮದ ಸಂಪೂರ್ಣ ಮಾಹಿತಿ ಲಭ್ಯವಾಗಬೇಕು. ಯಾವುದೇ ಮಾಹಿತಿಯೂ ಕೈತಪ್ಪಿ ಹೋಗಬಾರದು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು’ ಎಂದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ‘ನಗರ ವ್ಯಾಪ್ತಿಯಲ್ಲೂ ಸಮರ್ಪಕವಾಗಿ ನೀರು ಕಲ್ಪಿಸುವ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಬೇಕು’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ವಿದ್ಯಾಕುಮಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಜಿ.ಪಂ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.