ಶಿರಾ: ಕಾಟಾಚಾರಕ್ಕೆ ಕನಕ ಜಯಂತಿ ಆಚರಿಸಲಾಗುತ್ತಿದೆ ಎಂದು ಆರೋಪಿಸಿ ತಾಲ್ಲೂಕು ಆಡಳಿತವನ್ನು ಕುರುಬ ಸಮಾಜದ ಮುಖಂಡರು ತರಾಟೆಗೆ ತೆಗೆದುಕೊಂಡರು.
ಸರ್ಕಾರ ಕನಕ ಜಯಂತಿ ಆವರಣೆಗೆ ರಜಾ ಮಂಜೂರು ಮಾಡಿದೆ. ಆದರೆ ಅಧಿಕಾರಿಗಳು ಕನಕ ಜಯಂತಿ ಆಚರಣೆಗೆ ಮಾಡದೆ ಗೈರು ಹಾಜರಾಗಿದ್ದಾರೆ. ತಾಲ್ಲೂಕು ಕಚೇರಿಯಲ್ಲಿ ಬೆರಳೆಣಿಕೆಯಷ್ಟು ಮಂದಿ ಅಧಿಕಾರಿಗಳು ಹಾಜರಿದ್ದಾರೆ. ಜೊತೆಗೆ ಜನಾಂಗದ ಮುಖಂಡರಿಗೆ ಸಹ ಸರಿಯಾಗಿ ಮಾಹಿತಿ ನೀಡದೆ ದಾಖಲೆಗಳಿಗೆ ಸೀಮಿತವಾಗುವಂತೆ ಕನಕ ಜಯಂತಿ ಆಚರಣೆಗೆ ಮುಂದಾಗಿರುವುದು ಖಂಡನೀಯ ಎಂದು ಮುಖಂಡರಾದ ಬಿ.ಕೆ.ಮಂಜುನಾಥ್, ಬರಗೂರು ನಟರಾಜು, ಶಿವಶಂಕರ್, ಎಸ್.ಎಲ್.ರಂಗನಾಥ್, ರಂಗನಾಥ ಎಸ್.ಕೆ.ದಾಸಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಮುಖಂಡರು, ಯಾವುದೇ ಕಾರಣಕ್ಕೂ ಕನಕ ಜಯಂತಿ ಆಚರಣೆ ಬೇಡ ಶಾಸಕರು ಬರಲಿ ಅವರೇ ತೀರ್ಮಾನ ಮಾಡಲಿ ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ಶಾಸಕ ಟಿ.ಬಿ.ಜಯಚಂದ್ರ ಅವರು ಅಧಿಕಾರಿಗಳು ಹಾಗೂ ಮುಖಂಡರ ಸಭೆ ನಡೆಸಿದರು. ಮುಂದೆ ಈ ರೀತಿ ಲೋಪವಾಗದಂತೆ ಎಚ್ಚರ ವಹಿಸಬೇಕೆಂದು ಎಚ್ಚರಿಕೆ ನೀಡಿದರು.
ಸರ್ಕಾರ ಮಹನೀಯರ ಜಯಂತಿಗೆ ರಜೆ ನೀಡುವುದು ಸಂಸ್ಕೃತಿ ಪರಂಪರೆ ಉಳಿಸಿ, ಅವರ ತತ್ವ ಸಿದ್ಧಾಂತವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಲಿ ಎಂದು. ಅಧಿಕಾರಿಗಳು ಮಜಾ ಮಾಡಲು ಅಲ್ಲ. ಸರ್ಕಾರದ ಮೂಲ ಉದ್ದೇಶವನ್ನು ಆರ್ಥ ಮಾಡಿಕೊಂಡಿಲ್ಲ. ಇನ್ನು ಮುಂದೆ ನಡೆಯುವ ಎಲ್ಲಾ ಜಯಂತಿಗಳಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಇಲ್ಲದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇಲ್ಲಿ ತಹಶೀಲ್ದಾರ್ ಮತ್ತು ಬಿಸಿಎಂ ಇಲಾಖೆ ಅಧಿಕಾರಿ ಇಬ್ಬರು ಹೊಸಬರು ಕಂದಾಯ ತನಿಖಾಧಿಕಾರಿ ಮುಂದೆ ಇದ್ದು ಕಾರ್ಯಕ್ರಮ ನಡೆಸಬೇಕು ಅವರೇ ಗೈರು ಹಾಜರಾಗಿದ್ದು ಅವರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು ಸಭೆಗೆ ಗೈರು ಹಾಜರಾದ ಎಲ್ಲರಿಗೂ ನೋಟೀಸ್ ನೀಡುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.
ವಿಧಾನಸಭೆಯಲ್ಲಿ ಈ ಬಗ್ಗೆ ಪ್ರಸ್ಥಾಪ ಮಾಡಿ ಇನ್ನು ಮುಂದೆ ರಾಜ್ಯದಲ್ಲಿ ನಡೆಯುವ ಎಲ್ಲಾ ಜಯಂತಿಗಳಲ್ಲಿ ಪ್ರತಿಯೊಬ್ಬ ಅಧಿಕಾರಿ ಕಡ್ಡಾಯವಾಗಿ ಹಾಜರಿರುವಂತೆ ಕಾನೂನು ರೂಪಿಸಲಾಗುವುದು ಎಂದರು.
ಸಭೆ ಬಳಿಕ ಜಯಂತಿ ಆಚರಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.