ADVERTISEMENT

ಅಧಿಕಾರಿ ಗೈರು: ಸೋಮಣ್ಣ ಗರಂ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 14:08 IST
Last Updated 14 ಜೂನ್ 2024, 14:08 IST
ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಯನ್ನು ಶುಕ್ರವಾರ ಭೇಟಿಮಾಡಿದ ಕೇಂದ್ರ ಸಚಿವ ವಿ.ಸೋಮಣ್ಣ ಆಶೀರ್ವಾದ ಪಡೆದುಕೊಂಡರು. ಬಿಜೆಪಿ, ಜೆಡಿಎಸ್ ಮುಖಂಡರಾದ ಸೊಗಡು ಶಿವಣ್ಣ, ಎಂ.ವಿ.ವೀರಭದ್ರಯ್ಯ, ಆರ್.ಸಿ.ಆಂಜಿನಪ್ಪ, ಜಿ.ಎಸ್.ಬಸವರಾಜು, ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್ ಇತರರು ಹಾಜರಿದ್ದರು
ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಯನ್ನು ಶುಕ್ರವಾರ ಭೇಟಿಮಾಡಿದ ಕೇಂದ್ರ ಸಚಿವ ವಿ.ಸೋಮಣ್ಣ ಆಶೀರ್ವಾದ ಪಡೆದುಕೊಂಡರು. ಬಿಜೆಪಿ, ಜೆಡಿಎಸ್ ಮುಖಂಡರಾದ ಸೊಗಡು ಶಿವಣ್ಣ, ಎಂ.ವಿ.ವೀರಭದ್ರಯ್ಯ, ಆರ್.ಸಿ.ಆಂಜಿನಪ್ಪ, ಜಿ.ಎಸ್.ಬಸವರಾಜು, ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್ ಇತರರು ಹಾಜರಿದ್ದರು   

ತುಮಕೂರು: ಕೇಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಶುಕ್ರವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಹಾಜರಿರದ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಕಲುಷಿತ ನೀರು ಸೇವಿಸಿ ವಾಂತಿ, ಭೇದಿಯಿಂದ ಅಸ್ವಸ್ಥರಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದ ಜನರನ್ನು ಭೇಟಿಮಾಡಿ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ. ಸಿಇಒ ಜಿ.ಪ್ರಭು ಹಾಜರಿರಲಿಲ್ಲ. ಕೊರಟಗೆರೆ ತಾಲ್ಲೂಕಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ತೆರಳಿದ್ದರು. ಆಸ್ಪತ್ರೆಗೆ ಭೇಟಿ ನೀಡುವ ಬಗ್ಗೆ ಮೊದಲೇ ತಿಳಿಸಿದ್ದರೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇಲ್ಲದಿರುವುದನ್ನು ಕಂಡು ಬೇಸರ ತೋಡಿಕೊಂಡರು.

ADVERTISEMENT

ನಂತರ ಜಿಲ್ಲಾಧಿಕಾರಿ, ಸಿಇಒಗೆ ದೂರವಾಣಿ ಕರೆಮಾಡಿ ಆಕ್ಷೇಪ ವ್ಯಕ್ತಪಡಿಸಿದರು. ‘ನಾನು ಆಸ್ಪತ್ರೆಗೆ ಬರುತ್ತೇನೆ. ನೀವು ಹಾಜರಿರುವಂತೆ ತಿಳಿಸಿದ್ದೆ. ಆದರೂ ಬಂದಿಲ್ಲ. ಎಲ್ಲಿಗೆ ಹೋಗಿದ್ದೀರಿ. ನೀವು ಇಲ್ಲಿಗೆ ಯಾವ ರೀತಿ ಬಂದಿದ್ದೀರಿ, ಯಾರ ಬೆಂಬಲ ಇದೆ ಎಂಬುದು ಗೊತ್ತು? ನನ್ನ ಕಾರ್ಯಕ್ರಮ ಬಿಟ್ಟು ಯಾರದ್ದೋ ಕಾರ್ಯಕ್ರಮಕ್ಕೆ ಹೋಗಿದ್ದೀರಿ. ಪಂಚಾಯತ್ ರಾಜ್ ಇಲಾಖೆಯಲ್ಲಿ ಕುಡಿಯುವ ನೀರಿನ ಹೊಣೆಹೊತ್ತ ಯಾವ ಎಂಜಿಯರುಗಳೂ ಇಲ್ಲ’ ಎಂದು ಆಕ್ಷೇಪಿಸಿದರು. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುವಂತೆ ಸೂಚಿಸಿದರು.

ಇದಕ್ಕೂ ಮುನ್ನ ಸಿದ್ಧಗಂಗಾ ಮಠಕ್ಕೆ ಭೇಟಿನೀಡಿ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು.

ಕೇಂದ್ರ ಸಚಿವರಾದ ನಂತರ ಜಿಲ್ಲೆಗೆ ಬಂದ ಸೋಮಣ್ಣ ಅವರಿಗೆ ಜಾಸ್ ಟೋಲ್‌ಗೇಟ್‌ಗಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಸ್ವಾಗತಿಸಿದರು.

ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್, ಚಿದಾನಂದ್ ಎಂ.ಗೌಡ, ಮಾಜಿ ಸಂಸದ ಜಿ.ಎಸ್.ಬಸವರಾಜು, ಬಿಜೆಪಿ, ಜೆಡಿಎಸ್ ಮುಖಂಡರಾದ ಸೊಗಡು ಶಿವಣ್ಣ, ಎಚ್.ಎಸ್.ರವಿಶಂಕರ್, ಆರ್.ಸಿ.ಆಂಜಿನಪ್ಪ, ಎಂ.ವಿ.ವೀರಭದ್ರಯ್ಯ, ದಿಲೀಪ್‍ಕುಮಾರ್, ಅನಿಲ್‍ಕುಮಾರ್, ವೈ.ಎಚ್.ಹುಚ್ಚಯ್ಯ, ಕೊಂಡವಾಡಿ ಚಂದ್ರಶೇಖರ್ ಮೊದಲಾದವರು ಪಾಲ್ಗೊಂಡಿದ್ದರು.

ಸಚಿವರ ಸ್ಪಷ್ಟನೆ: ‘ಸೋಮಣ್ಣ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ. ನಾನು ಕೊರಟಗೆರೆಯಲ್ಲಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ, ಜಿ.ಪಂ ಸಿಇಒ ಇದ್ದರು. ಉಪವಿಭಾಗಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಶಿಷ್ಟಾಚಾರ ಪಾಲನೆ ಮಾಡಿರುತ್ತಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಸ್ಪಷ್ಟನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.