ಹುಳಿಯಾರು: ಪಟ್ಟಣದಲ್ಲಿ ‘ಒಂದು ರೂಪಾಯಿ ಇಡ್ಲಿ ಹೋಟೆಲ್’ ಎಂದೇ ಹೆಸರು ಮಾಡಿರುವ ‘ಕಾಂತಮ್ಮ ಕ್ಯಾಂಟೀನ್’ ಬೆಲೆ ಏರಿಕೆ ಸೇರಿದಂತೆ ಆಧುನಿಕ ಭರಾಟೆಯ ಮಧ್ಯೆಯೂ ಗ್ರಾಹಕರನ್ನು ಸೆಳೆಯುತ್ತಿದೆ.
ಕಾಂತಮ್ಮ ಅವರು ಕಳೆದ 25 ವರ್ಷಗಳ ಹಿಂದೆ ಜೀವನ ನಿರ್ವಹಣೆಗೆ ಪಟ್ಟಣದ ದುರ್ಗಮ್ಮಗುಡಿ ಬೀದಿಯ ವಾಸದ ಮನೆಯಲ್ಲಿಯೇ ಹೋಟೆಲ್ ಆರಂಭಿಸಿದ್ದರು. ಅವರ ಬದುಕು ಇಂದಿಗೂ ಆರಕ್ಕೇರದೆ ಮೂರಕ್ಕಿಳಿಯದೆ ನಡೆಯುತ್ತಾ ಬಂದಿದೆ. ಆರಂಭದಲ್ಲಿ ಒಂದು ಗುಂಡು ಇಡ್ಲಿಗೆ 25 ಪೈಸೆ ಪಡೆಯುತ್ತಿದ್ದರು. ಪ್ರಸ್ತುತ 1 ರೂಪಾಯಿಗೆ ಏರಿಕೆ ಮಾಡಿದ್ದಾರೆ. ಹೋಟೆಲ್‌ನಲ್ಲಿ ಇಡ್ಲಿ ಮಾತ್ರವಲ್ಲದೆ ₹5ಕ್ಕೆ ದೋಸೆ ಹಾಗೂ ₹20ಕ್ಕೆ ಮೂರು ಪೂರಿ ಸಿಗುತ್ತದೆ.
ಬೆಳಗ್ಗೆಯೇ ತಿಂಡಿ ಅರಸಿ ಬರುವ ಗ್ರಾಹಕರು ಮನೆಗೂ ತೆಗೆದುಕೊಂಡು ಹೋಗುತ್ತಾರೆ. ಮನೆ ತೀರಾ ಚಿಕ್ಕದಾಗಿದ್ದು ಕುಳಿತು ತಿನ್ನಲು ಸ್ವಲ್ಪ ತ್ರಾಸವಾದರೂ ಕೆಲವರು ಇಲ್ಲಿಯೇ ತಿಂಡಿ ಸೇವಿಸಿ ಮುಂದೆ ಹೋಗುತ್ತಾರೆ. ಹೋಟೆಲ್ ಜನ ಸಂಚಾರವಿಲ್ಲದ ಸಂದಿಯಲ್ಲಿದ್ದರೂ ಕೂಡ ಪಟ್ಟಣದ ಗ್ರಾಹಕರು ಹುಡುಕಿಕೊಂಡು ಬರುತ್ತಾರೆ.
ಹೋಟೆಲ್ ನಡೆಸುವುದರಿಂದ ಬರುವ ಆದಾಯದಿಂದಲೇ ಜೀವನ ಸಾಗಿಸುತ್ತಿದ್ದಾರೆ. ದೊಡ್ಡ ದೊಡ್ಡ ಹೋಟೆಲ್ ಶುರು ಮಾಡಿ, ಕೆಲಸಗಾರರು, ಬಾಡಿಗೆ ಸೇರಿ ಇತರ ಖರ್ಚುಗಳಿಂದ ಬೇಸತ್ತು ಹೋಟೆಲ್ ಉದ್ಯಮವೇ ಬೇಡ ಎನ್ನುವವರಿಗೆ ಕಾಂತಮ್ಮ ಮಾದರಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.