ತುಮಕೂರು: ಈ ವಾರ ತರಕಾರಿ ಬೆಲೆ ಅಲ್ಪ ಮಟ್ಟಿಗೆ ಇಳಿಕೆಯತ್ತ ಸಾಗಿದ್ದು, ಬೇಳೆ ಧಾರಣೆ ಕೊಂಚ ಏರಿಕೆಯಾಗಿದೆ. ಹಣ್ಣು ದರ ಮತ್ತೆ ಹೆಚ್ಚಳವಾಗಿದ್ದು, ಕೋಳಿ ಮಾಂಸ ಮತ್ತಷ್ಟು ಅಗ್ಗವಾಗಿದೆ.
ಕಳೆದ ಕೆಲವು ವಾರಗಳಿಂದ ಗಗನಮುಖಿಯಾಗಿದ್ದ ತರಕಾರಿ ಬೆಲೆ ಈಗ ಕಡಿಮೆಯಾಗುವತ್ತ ಮುಖ ಮಾಡಿದೆ. ಮಳೆ ಬಿಡುವು ಕೊಟ್ಟ ನಂತರ ಬೆಳೆ ಚೇತರಿಸಿಕೊಂಡಿದ್ದು, ನಿಧಾನವಾಗಿ ಆವಕದಲ್ಲಿ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಬೆಲೆ ಇಳಿಕೆಯಾಗಿದೆ. ಕ್ಯಾರೇಟ್, ಗೆಡ್ಡೆಕೋಸು, ಮೂಲಂಗಿ, ಬೆಂಡೆಕಾಯಿ, ಬದನೆಕಾಯಿ, ಮೂಲಂಗಿ, ಕೋಸು ದರ ಸ್ವಲ್ಪ ಮಟ್ಟಿಗೆ ತಗ್ಗಿದೆ. ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಮತ್ತಷ್ಟು ಕುಸಿಯುತ್ತಲೇ ಸಾಗಿದೆ. ನುಗ್ಗೇಕಾಯಿ ಒಮ್ಮೆಲೆ ದುಪ್ಪಟ್ಟಾಗಿದ್ದು, ಕೆ.ಜಿ ₹110–120ಕ್ಕೆ ಜಿಗಿದಿದೆ.
ಈರುಳ್ಳಿ ಜನರಲ್ಲಿ ಕಣ್ಣೀರು ತರಿಸುತ್ತಿದ್ದು, ಮತ್ತಷ್ಟು ದುಬಾರಿಯಾಗಿದೆ. ಬೆಳ್ಳುಳ್ಳಿ ಕೆ.ಜಿ ₹400ರ ವರೆಗೂ ಏರಿಕೆ ಕಂಡಿದೆ.
ಕೊತ್ತಂಬರಿ ಇಳಿಕೆ: ಕೊತ್ತಂಬರಿ ಸೊಪ್ಪಿನ ಬೆಲೆ ಮಾತ್ರ ಅಲ್ಪ ಇಳಿಕೆಯಾಗಿದ್ದರೆ, ಇತರೆ ಸೊಪ್ಪಿನ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕೊತ್ತಂಬರಿ ಸೊಪ್ಪು ಕೆ.ಜಿ ₹50–60, ಸಬ್ಬಕ್ಕಿ ಕೆ.ಜಿ ₹50–60, ಮೆಂತ್ಯ ಸೊಪ್ಪು ಕೆ.ಜಿ ₹70–80, ಪಾಲಕ್ ಸೊಪ್ಪು (ಕಟ್ಟು) ₹80ಕ್ಕೆ ಮಾರಾಟವಾಗುತ್ತಿದೆ.
ಬಾಳೆಹಣ್ಣು ಅಗ್ಗ: ಏಲಕ್ಕಿ ಬಾಳೆಹಣ್ಣು ಕುಸಿತ ಮುಂದುವರಿಸಿದ್ದು, ಕೆ.ಜಿ ₹55–60ಕ್ಕೆ ಇಳಿದಿದೆ. ದಾಳಿಂಬೆ ದರ ಕೊಂಚ ಕಡಿಮೆಯಾಗಿದೆ. ಆದರೆ ಸೇಬು ದುಬಾರಿಯಾಗಿದ್ದು, ಡ್ರ್ಯಾಗನ್ ಫ್ರೂಟ್ ಒಮ್ಮೆಲೆ ದುಪ್ಪಟ್ಟಾಗಿದೆ.
ಎಣ್ಣೆ ಏರಿಕೆ: ಹಿಂದಿನ ವಾರ ಅಲ್ಪ ಇಳಿಕೆಯಾಗಿದ್ದ ಅಡುಗೆ ಎಣ್ಣೆ ಮತ್ತೆ ಏರಿಕೆಯತ್ತ ಮುಖ ಮಾಡಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹140–142, ಪಾಮಾಯಿಲ್ ಕೆ.ಜಿ ₹130–132, ಕಡಲೆಕಾಯಿ ಎಣ್ಣೆ ಕೆ.ಜಿ ₹158–162ಕ್ಕೆ ಹೆಚ್ಚಳವಾಗಿದೆ.
ಬೇಳೆ ಧಾರಣೆ: ಬೇಳೆ ಬೆಲೆ ತುಸು ಹೆಚ್ಚಳವಾಗಿದ್ದು, ಕಾಳುಗಳು ಅಲ್ಪ ಕಡಿಮೆಯಾಗಿವೆ. ಬಟಾಣಿ ದಾಖಲೆ ಬೆಲೆಯತ್ತ ಹೆಜ್ಜೆ ಹಾಕಿದ್ದು, ಕೆ.ಜಿ ₹190ಕ್ಕೆ ತಲುಪಿದೆ.
ಮಸಾಲೆ ಪದಾರ್ಥ: ಮಸಾಲೆ ಪದಾರ್ಥಗಳ ಧಾರಣೆ ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿದೆ. ಮೆಣಸು, ಲವಂಗ ಕೊಂಚ ಏರಿಕೆಯಾಗಿದ್ದು, ಜೀರಿಗೆ ಇಳಿಕೆಯಾಗಿದೆ.
ಧನ್ಯ ಕೆ.ಜಿ ₹110–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹240–260, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹160–170, ಹುಣಸೆಹಣ್ಣು ₹120–160, ಬೆಲ್ಲ ಕೆ.ಜಿ ₹50–55, ಕಾಳುಮೆಣಸು ಕೆ.ಜಿ ₹700–720, ಜೀರಿಗೆ ಕೆ.ಜಿ ₹310–320, ಚಕ್ಕೆ ಕೆ.ಜಿ ₹255–260, ಲವಂಗ ಕೆ.ಜಿ ₹850–900, ಗುಣಮಟ್ಟದ ಗಸಗಸೆ ಕೆ.ಜಿ ₹1,200–1,250, ಏಲಕ್ಕಿ ಕೆ.ಜಿ ₹2,600–2,800, ಬಾದಾಮಿ ಕೆ.ಜಿ ₹700–720, ಗೋಡಂಬಿ ಕೆ.ಜಿ ₹880–950, ಒಣದ್ರಾಕ್ಷಿ ಕೆ.ಜಿ ₹200–220ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಕೋಳಿ ಮಾಂಸ ಅಗ್ಗ: ಕಾರ್ತಿಕ ಮಾಸ ಆರಂಭವಾದ ನಂತರ ಕೋಳಿ ಮಾಂಸದ ಬೆಲೆ ಇಳಿಕೆಯತ್ತ ಸಾಗಿದ್ದು, ಈ ವಾರವೂ ಕಡಿಮೆಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹100, ರೆಡಿ ಚಿಕನ್ ಕೆ.ಜಿ ₹160, ಸ್ಕಿನ್‌ಲೆಸ್ ಕೆ.ಜಿ ₹180, ಮೊಟ್ಟೆಕೋಳಿ (ಫಾರಂ) ಕೆ.ಜಿ ₹130ಕ್ಕೆ ಸಿಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.