ತುಮಕೂರು: ಆನ್‌ಲೈನ್‌ನಲ್ಲಿ ಚಿನ್ನ ಖರೀದಿ, ಮಾರಾಟದ ಟಾಸ್ಕ್ ಪೂರ್ಣಗೊಳಿಸಿ ಹೆಚ್ಚಿನ ಹಣ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ಪಾವಗಡ ತಾಲ್ಲೂಕಿನ ಕಡಪಲಕೆರೆಯ ಉದ್ಯಮಿ ಕೆ.ಎಲ್.ಮಂಜುಶ ಎಂಬುವರು ₹6.10 ಲಕ್ಷ ಕಳೆದುಕೊಂಡಿದ್ದಾರೆ.
ಟೆಲಿಗ್ರಾಮ್‌ನಲ್ಲಿ ‘ಅನುಷ್ಕಾ’ ಎಂಬ ಹೆಸರಿನಿಂದ Boucheron.com ವೆಬ್‌ಸೈಟ್ ಲಿಂಕ್ ಕಳುಹಿಸಿ ಟಾಸ್ಕ್ ಬಗ್ಗೆ ತಿಳಿಸಿದ್ದಾರೆ. ಉದ್ಯಮಿಯು ಸದರಿ ವೆಬ್‌ಸೈಟ್‌ನಲ್ಲಿ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ ಸೇರಿ ಅಗತ್ಯ ಮಾಹಿತಿ ಸಲ್ಲಿಸಿದ್ದಾರೆ. ಚಿನ್ನ ಖರೀದಿ, ಮಾರಾಟದ ಟಾಸ್ಕ್ ಪೂರ್ಣಗೊಳಿಸಿದ ನಂತರ ಅವರ ಖಾತೆಗೆ ₹1,400 ವರ್ಗಾಯಿಸಿದ್ದಾರೆ.
ಇದಾದ ಮೇಲೆ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಉತ್ತಮ ಲಾಭ ಗಳಿಸಬಹುದು ಎಂದು ನಂಬಿಸಿದ್ದಾರೆ. ಸೈಬರ್ ವಂಚಕರು ಹೇಳಿದ ಯುಪಿಐ ಐ.ಡಿಗೆ ₹6 ಸಾವಿರ ವರ್ಗಾಯಿಸಿದ್ದು, ₹11,320 ವಾಪಸ್ ಹಾಕಿದ್ದಾರೆ. ನಂತರ ‘ಅನುಷ್ಕಾ’ ಎಂಬ ಹೆಸರಿನಿಂದ ಕರೆ ಮಾಡಿ ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ.
ಅ. 28ರಿಂದ ನ. 4ರ ವರೆಗೆ ವಿವಿಧ ಬ್ಯಾಂಕ್ ಖಾತೆ ಮತ್ತು ಯುಪಿಐ ಐ.ಡಿಗಳಿಗೆ ಹಂತ ಹಂತವಾಗಿ ₹6,10,770 ಹಣ ವರ್ಗಾವಣೆ ಮಾಡಿದ್ದಾರೆ. ನಂತರ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.