ಕುಣಿಗಲ್: ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿ ಗಣನೀಯವಾಗಿ ಕುಸಿಯುತ್ತಿದ್ದು, ಏಕೋಪಾಧ್ಯಾಯ ಶಾಲೆಗಳು ಹೆಚ್ಚಾಗುತ್ತಿದೆ.
ತಾಲ್ಲೂಕಿನಲ್ಲಿ 199 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿದ್ದು, ಅವುಗಳಲ್ಲಿ 81 ಏಕೋಪಾಧ್ಯಾಯ ಶಾಲೆಗಳು. ಅದರಲ್ಲೂ 81 ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ 5ಕ್ಕಿಂತ ಕಡಿಮೆ.
ಕರೆಕಲ್ಲುಪಾಳ್ಯ, ಸಿದ್ದಯ್ಯನಕೆರೆ, ನಿಂಗಿಕೊಪ್ಪಲು, ತೆಪ್ಪಸಂದ್ರ, ಎಸ್.ಕೆ. ಜನತಾ ಕಾಲೊನಿ ಶಾಲೆಗಳಲ್ಲಿ ಕೇವಲ ಇಬ್ಬರು ವಿದ್ಯಾರ್ಥಿಗಳಿದ್ದಾರೆ. ಸಿ.ಟಿ.ಪಾಳ್ಯ, ಬೂದಾನಹಳ್ಳಿ, ಕೋಘಟ್ಟ, ಕನ್ನಗುಣಿ, ಅರ್ಜುನಹಳ್ಳಿ, ಹುನುಗನಹಳ್ಳಿ, ತೊರೆ ಬೊಮ್ಮನಹಳ್ಳಿ, ನರಜನಕುಪ್ಪೆ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಮೂರು ಮಾತ್ರ. ಉಳಿದೆಡೆ ವಿದ್ಯಾರ್ಥಿಗಳ ಸಂಖ್ಯೆ 5ರಿಂದ 10.
ಏಕೋಪಾಧ್ಯಾಯ ಶಾಲೆಗಳಿಂದ ಪ್ರಾಮಾಣಿಕಾಗಿ ಕರ್ತವ್ಯ ನಿರ್ವಹಿಸುವ ಶಿಕ್ಷಕರಿಗೆ ಅಗತ್ಯ ವಿದ್ಯಾರ್ಥಿಗಳಿಲ್ಲದಿರುವುದು ಕೊರಗಾಗಿದೆ. ಕುಂಟು ನೆಪವೊಡ್ಡಿ ಸರಿಯಾಗಿ ಕಾರ್ಯನಿರ್ವಹಿಸದ ಶಿಕ್ಷಕರಿಗೆ ಇದರಿಂದ ಲಾಭವಾಗುತ್ತಿದೆ ಎನ್ನುವುದು ಪೋಷಕರ ಅಭಿಪ್ರಾಯ.
ಬಹುತೇಕ ಏಕೋಪಾಧ್ಯಾಯ ಶಾಲೆಗಳು ಗ್ರಾಮೀಣ ಪ್ರದೇಶದಲ್ಲಿರುವುದರಿಂದ ಬಿಸಿಯೂಟ ಯೋಜನೆಯಲ್ಲಿಯೂ ಹಲವು ಲೋಪಗಳಿವೆ ಎನ್ನುವುದು ಪೋಷಕರ ದೂರು.
ಏಕೋಪಾಧ್ಯಾಯ ಶಾಲೆಗಳಲ್ಲಿ ಶಿಕ್ಷಕರಿಗೂ ಸಮಸ್ಯೆಯಾಗುತ್ತಿದ್ದು, ರಜೆ ಮೇಲೆ ತೆರಳುವ ಮುನ್ನ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾದ ಅನಿವಾರ್ಯ ಇದೆ. ಜತೆಗೆ ಪರ್ಯಾಯ ವ್ಯವಸ್ಥೆಗೆ ಕ್ರಮ ತೆಗೆದುಕೊಳ್ಳಬೇಕಿದೆ. ಹೊರೆ ಹೆಚ್ಚಾಗುತ್ತಿದೆ. ಇಲಾಖಾ ತರಬೇತಿ, ಸಭೆಗಳಿಗೆ ಹೋಗಲೇಬೇಕಾದ ಪರಿಸ್ಥಿತಿಯಲ್ಲಿ ತೊಂದರೆಯಾಗುತ್ತಿದ್ದು, ವೃತ್ತಿಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಶಿವರಾಮು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಶಾಲೆ ಉಳಿವಿಗಾಗಿ ಇಂಗ್ಲಿಷ್ ಭೋಧನೆಗೆ ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯಿತಿ, ಹೋಬಳಿವಾರು, ಮಾದರಿ ಶಾಲೆಗಳನ್ನು ಪ್ರಾರಂಭಿಸಬೇಕು ಎಂದು ಪುರಸಭೆ ಮಾಜಿ ಸದಸ್ಯ ಕೆ.ರಮೇಶ್ ಮನವಿ ಮಾಡಿದರು.
ಏಕೋಪಾಧ್ಯಾಯ ಶಾಲೆಗಳು ಸರ್ಕಾರಕ್ಕೆ ಹೊರೆಯಾಗುತ್ತಿವೆ. ಗುಣಮಟ್ಟದ ಶಿಕ್ಷಣ ಮರಿಚಿಕೆಯಾಗುತ್ತಿದ್ದು, ಶೈಕ್ಷಣಿಕ ಪ್ರಗತಿಯ ಹಿತದೃಷ್ಟಿಯಿಂದ ಹೋಬಳಿವಾರು ಮಾದರಿ ಶಾಲೆಗಳನ್ನು ಪ್ರಾರಂಭಿಸಬೇಕು. ಆಗ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಕೊರತೆ ನೀಗುತ್ತದೆ ಎಂದು ಹುಲಿಯೂರುದುರ್ಗ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎನ್. ನಟರಾಜು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಶಾಲೆಗಳನ್ನು ಮುಚ್ಚುವ ಬದಲು ಸಮೀಪದ ಶಾಲೆಗಳಿಗೆ ದಾಖಲಿಸಿ, ಪೋಷಕರ ಅಪೇಕ್ಷೆಯಂತೆ ಇಂಗ್ಲಿಷ್ ಮಾಧ್ಯಮ ಭೋಧನೆಗೆ ಗಮನಹರಿಸಬೇಕು ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.