ADVERTISEMENT

ಕುಣಿಗಲ್ | ಎರಡು ಬಾರಿ ಉದ್ಘಾಟನೆ; ಬಳಕೆಯಾಗದೆ ಚಿತಾಗಾರ

ನಿರ್ವಹಣೆ ವೈಫಲ್ಯದಿಂದ ಶಿಥಲಾವಸ್ಥೆ ತಲುಪುತ್ತಿರುವ ವಿದ್ಯುತ್ ಚಿತಾಗಾರ

ಟಿ.ಎಚ್.ಗುರುಚರಣ್ ಸಿಂಗ್
Published 23 ಆಗಸ್ಟ್ 2024, 5:49 IST
Last Updated 23 ಆಗಸ್ಟ್ 2024, 5:49 IST
ಕುಣಿಗಲ್ ಪಟ್ಟಣದಲ್ಲಿನ ಬಳಕೆಯಾಗದ ವಿದ್ಯುತ್ ಚಿತಾಗಾರ
ಕುಣಿಗಲ್ ಪಟ್ಟಣದಲ್ಲಿನ ಬಳಕೆಯಾಗದ ವಿದ್ಯುತ್ ಚಿತಾಗಾರ   

ಕುಣಿಗಲ್: ಶಾಸಕ ಡಾ.ರಂಗನಾಥ್ ಅಧ್ಯಕ್ಷತೆಯಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಂದ ಎರಡು ಬಾರಿ ಉದ್ಘಾಟನೆಯಾದ ಪಟ್ಟಣದ ಕುಂಬಾರಗುಂಡಿ ಸ್ಮಶಾನದಲ್ಲಿ ₹3.50 ಕೋಟಿ ವೆಚ್ಚದ ಆಧುನಿಕ ವಿದ್ಯುತ್ ಚಿತಾಗಾರ ನಿರ್ವಹಣೆ ವೈಫಲ್ಯದಿಂದ ಶಿಥಲಾವಸ್ಥೆ ತಲುಪುತ್ತಿದೆ.

ಡಿ.ಕೆ.ಸುರೇಶ್ ಅವರ ಅವಧಿಯಲ್ಲಿ ಸಂಸದರ ಅನುದಾನದಲ್ಲಿ ಆದುನಿಕ ವಿದ್ಯುತ್ ಚಿತಾಗಾರ ಕಾಮಗಾರಿ 2019 ಪ್ರಾರಂಭವಾಗಿತ್ತು. ಅನುದಾನ ಬಿಡುಗಡೆ ವಿಳಂಬವಾದ ಕಾರಣ ಕಾಮಗಾರಿ ಕುಂಟುತ್ತ ಸಾಗಿತ್ತು. 2022ರಲ್ಲಿ ಕಾಮಗಾರಿ ಪೂರ್ಣಗೊಂಡು ಪ್ರಥಮ ಬಾರಿಗೆ ಉದ್ಘಾಟನೆಯಾಗಿತ್ತು.

ತಾಂತ್ರಿಕ ಕಾರಣಗಳಿಂದಾಗಿ ಮತ್ತೆ ವಿಳಂಬವಾಗಿದ್ದು, ಲೋಕಸಭಾ ಚುನಾವಣೆಗೂ ಮುನ್ನ ಸಂಸದರ ಬಹುಕೋಟಿಯ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳ ಸಾಮೂಹಿಕ ಉದ್ಘಾಟನೆಯ ಕಾರ್ಯಕ್ರಮಗಳಲ್ಲಿ ವಿದ್ಯುತ್ ಚಿತಾಗಾರ ಉದ್ಘಾಟನೆಯ ಕಾರ್ಯಕ್ರಮ ಎರಡನೇ ಬಾರಿಗೆ ನಡೆಯಿತು.

ADVERTISEMENT

ಪುರಸಭೆಯಿಂದ ನಾಗರಿಕರ ಬಹುದಿನದ ಬೇಡಿಕೆಯಾಗಿದ್ದ ಶವ ಸಾಗಣೆ ವಾಹನ ಮತ್ತು ವಿದ್ಯತ್ ಚಿತಾಗಾರ ಉದ್ಘಾಟನೆ ಕಾರ್ಯಕ್ರಮ ಒಂದೇ ದಿನ ನಡೆದಿದ್ದರೂ, ಶವ ಸಾಗಣೆ ವಾಹನಕ್ಕೆ ₹500 ಮತ್ತು ಅಂತ್ಯ ಸಂಸ್ಕಾರಕ್ಕೆ ₹1,000 ನಿಗದಿಗೊಳಿಸಲಾಗಿತ್ತು. ಶವ ಸಾಗಣೆ ವಾಹನ ಮಾತ್ರ ಬಳಕೆಯಾಗುತ್ತಿದ್ದು, ವಿದ್ಯುತ್ ಚಿತಾಗಾರವನ್ನು ಪುರಸಭೆಯವರು ವಶಕ್ಕೆ ಪಡೆದು ಆರು ತಿಂಗಳು ಕಳೆದಿದೆ. ಶವ ಸಂಸ್ಕಾರಕ್ಕಾಗಿ ಸಂಪರ್ಕಿಸಿದಾಗ ಪುರಸಭೆಯಿಂದ ಸ್ಪಂದನೆ, ಉತ್ತರ ಸಿಗದೆ ನಾಗರಿಕರು ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ಕಾರ್ಯ ಕೈಬಿಟ್ಟು ಎಂದಿನಂತೆ ಸ್ಮಶಾನದ ಕಡೆ ಸಾಗುತ್ತಿದ್ದಾರೆ.

ವಿದ್ಯುತ್ ಚಿತಾಗಾರ ನಿರ್ವಹಣೆಯಲ್ಲಿ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವ ಪರಿಣಾಮ ₹3.50 ಕೋಟಿ ವೆಚ್ಚದ ಚಿತಾಗಾರ ಬಳಕೆಯಾಗದೆ ಶಿಥಿಲಾವಸ್ಥೆ ತಲುಪುತ್ತಿದೆ. ಬಡವರ ಮನೆಯಲ್ಲಿ ಯಾರಾದರೂ ಮೃತಪಟ್ಟಾಗ ಅಂತ್ಯಕ್ರಿಯೆಗೆ ಹತ್ತಾರು ಸಾವಿರ ವೆಚ್ಚ ಮಾಡಬೇಕಾದ ಸ್ಥಿತಿ ಇದೆ. ಬಡವರ ಅನುಕೂಲಕ್ಕಾಗಿ ವಿದ್ಯುತ್ ಚಿತಾಗಾರವನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಮೇಸ್ಟ್ರಿ ರಂಗಸ್ವಾಮಿ ಮನವಿ ಮಾಡಿದ್ದಾರೆ.

‘ತಮ್ಮ ಕಾಲದಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಡಾ.ರಂಗನಾಥ್ ಗಮನಹರಿಸಿ ಮುಂದುವರೆಸುತ್ತಾರೆ’ ಎಂದು ಮಾಜಿ ಸಂಸದ ಡಿ.ಕೆ.ಸುರೇಶ ತಿಳಿಸಿದ್ದಾರೆ. ಶಾಸಕ ಡಾ.ರಂಗನಾಥ್ ಅವರು ವಿದ್ಯುತ್ ಚಿತಾಗಾರ ನಿರ್ವಹಣೆಗೆ ಪುರಸಭೆ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಕರವೇ ಅಧ್ಯಕ್ಷ ಮಂಜುನಾಥ್ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.