ಕೊಡಿಗೇನಹಳ್ಳಿ (ಮಧುಗಿರಿ ತಾಲ್ಲೂಕು): ಗೌರಿಬಿದನೂರು ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಕುಮುದ್ವತಿ ನದಿ ತುಂಬಿ ಹರಿಯಿತು. ಕೊಡಿಗೇನಹಳ್ಳಿ ಹೋಬಳಿ ಶ್ರಾವಂಡನಹಳ್ಳಿ ಗ್ರಾಮದ ಸುತ್ತಮುತ್ತಲಿನ ನೂರಾರು ಜನರು ನದಿ ಹರಿಯುವುದನ್ನು ಕಂಡು ಖುಷಿಪಟ್ಟರೆ, ಚಿಣ್ಣರು ನೀರಿನಲ್ಲಿ ಕುಣಿದು ಕುಪ್ಪಳಿಸಿ ಸಂತಸಗೊಂಡರು.
ಹಿಂದೆ ಮಳೆಗಾಲದಲ್ಲಿ ಸದಾ ತುಂಬಿ ಹರಿಯುತ್ತಿದ್ದ ಕುಮುದ್ವತಿ ಇತ್ತೀಚಿನ ವರ್ಷಗಳಲ್ಲಿ ಮಳೆ ಇಲ್ಲದೆ ಒಣಗಿತ್ತು. ಕೆಲ ವರ್ಷಗಳಿಂದ ಅಕ್ರಮ ಮರಳುಗಾರಿಕೆ ನಡೆದ ಕಾರಣ ನದಿ ಪಾತ್ರ ಬರಿದಾಗಿ ಸೀಮೆಜಾಲಿ ಗಿಡಗಳಿಂದ ಆವರಿಸಿಕೊಂಡಿತ್ತು. ಆದರೆ, ಭಾನುವಾರ ಸುರಿದ ಭಾರಿ ಮಳೆಗೆ ತುಂಬಿ ಹರಿದಿದೆ.
ಈ ನದಿ ದೊಡ್ಡಬಳ್ಳಾಪುರ ತಾಲ್ಲೂಕಿನ ಗುಂಡಮಗೆರೆ ಬೆಟ್ಟಗುಡ್ಡಗಳಲ್ಲಿ ಹುಟ್ಟಿದರೂ ಗೌರಿಬಿದನೂರು ತಾಲ್ಲೂಕು ಮಾರ್ಗವಾಗಿ ಮುದುಗೆರೆ ಹಂಪಸಂದ್ರ ಮತ್ತು ಕೊಡಿಗೇನಹಳ್ಳಿ ಹೋಬಳಿಯ ಶ್ರಾವಂಡನಹಳ್ಳಿ, ತಿಂಗಳೂರು, ಉಪ್ಪಾರಹಳ್ಳಿ, ಗುಂಡಗಲ್ಲು, ಕಡಗತ್ತೂರು, ಪರ್ತಿಹಳ್ಳಿ ಹಾಗೂ ಕಸಿನಾಯಕನಹಳ್ಳಿ ಮಾರ್ಗವಾಗಿ ಹರಿಯುತ್ತದೆ. ಆಂಧ್ರಪ್ರದೇಶದ ಊಟಕೂರು ಬಳಿ ಕುಮದ್ವತಿ, ಜಯಮಂಗಲಿ ಮತ್ತು ಉತ್ತರಪಿನಾಕಿನಿ ಮೂರು ನದಿಗಳು ಸಂಗಮವಾಗುತ್ತವೆ.
56.8 ಮಿ.ಮೀ. ಮಳೆ: ಕೊಡಿಗೇನಹಳ್ಳಿ ಹೋಬಳಿಯಲ್ಲಿ ಸುಮಾರು 56.8 ಮಿಲಿ ಮೀಟರ್ ಮಳೆ ದಾಖಲಾಗಿದೆ. ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಸಣ್ಣಪುಟ್ಟ ಹಳ್ಳ- ಕೊಳ್ಳಗಳು ತುಂಬಿ ಹರಿದಿವೆ. ಹಲವು ವರ್ಷಗಳ ನಂತರ ಇಂತಹ ಮಳೆ ಬಿದ್ದಿದ್ದು, ರೈತರ ಮುಖದಲ್ಲಿ ಸಂತಸ ಮೂಡಿದೆ. ಕೃಷಿ ಚಟುವಟಿಕೆಗಳು ಚುರುಕಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.