ADVERTISEMENT

ವಿಧಾನ ಪರಿಷತ್: ಶೇ 94ರಷ್ಟು ಮತದಾನ

ತಮ್ಮ ಹಕ್ಕು ಚಲಾಯಿಸಿದ ಶಿಕ್ಷಕರು; ಎಲ್ಲೆಡೆ ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2024, 2:16 IST
Last Updated 4 ಜೂನ್ 2024, 2:16 IST
ತುಮಕೂರಿನ ಜೂನಿಯರ್ ಕಾಲೇಜಿನಲ್ಲಿ ಸೋಮವಾರ ಶಿಕ್ಷಕರು ಮತದಾನ ಮಾಡಿದರು
ತುಮಕೂರಿನ ಜೂನಿಯರ್ ಕಾಲೇಜಿನಲ್ಲಿ ಸೋಮವಾರ ಶಿಕ್ಷಕರು ಮತದಾನ ಮಾಡಿದರು   

ತುಮಕೂರು: ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರ ನಡೆದ ಮತದಾನ ಶಾಂತಿಯುತವಾಗಿ ಮುಕ್ತಾಯ ಕಂಡಿದ್ದು, ಜಿಲ್ಲೆಯಲ್ಲಿ ಶೇ 94.86ರಷ್ಟು ಮತದಾನವಾಗಿದೆ.

ಬೆಳಗ್ಗೆಯಿಂದಲೇ ಶಿಕ್ಷಕರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು. ಆರಂಭದಲ್ಲಿ ಮಂದಗತಿಯಲ್ಲಿ ಸಾಗಿದ ಮತದಾನ ನಂತರ ಚುರುಕು ಪಡೆದುಕೊಂಡಿತು. ಮಧ್ಯಾಹ್ನದ ವೇಳೆಗೆ ಮತ್ತಷ್ಟು ಬಿರುಸಾಯಿತು. ಒಟ್ಟು 7,725 ಮತದಾರರು ಇದ್ದು, ಅದರಲ್ಲಿ 7,328 ಮಂದಿ ಮತದಾನ ಮಾಡಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಶೇ 97.73, ತುರುವೇಕೆರೆ ಶೇ 97,06ರಷ್ಟು ಅತಿ ಹೆಚ್ಚು ಮತದಾನವಾಗಿದ್ದರೆ, ಪಾವಗಡ ತಾಲ್ಲೂಕಿನಲ್ಲಿ ಅತಿ ಕಡಿಮೆ ಶೇ 93.02, ಕುಣಿಗಲ್ ತಾಲ್ಲೂಕು ಶೇ 93.06ರಷ್ಟು ಶಿಕ್ಷಕರು ಮತದಾನದಲ್ಲಿ ಪಾಲ್ಗೊಂಡಿದ್ದರು. ತುಮಕೂರು ತಾಲ್ಲೂಕಿನಲ್ಲಿ (ನಗರ ಹಾಗೂ ಗ್ರಾಮಾಂತರ ಸೇರಿ) ಶೇ 94.53ರಷ್ಟು ಮತದಾನವಾಗಿದೆ.

ADVERTISEMENT

ತುಮಕೂರು ನಗರದ ಮತದಾರರಿಗೆ ಜೂನಿಯರ್ ಕಾಲೇಜಿನಲ್ಲಿ 4 ಮತಗಟ್ಟೆ ಸ್ಥಾಪಿಸಲಾಗಿತ್ತು. ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆ ಭಾನುವಾರ ಸುರಿದ ಮಳೆಯಿಂದ ಕೆಸರು ಗದ್ದೆಯಂತಾಗಿತ್ತು. ಮತಗಟ್ಟೆಗೆ ತೆರಳಲು ಮತದಾರರು ಪರದಾಡಿದರು. ಕೆಲವರು ಕೆಸರಿನಲ್ಲೇ ತೆರಳಿದರು.

ಮತದಾನ ಮಾಡಲು ಬಂದ ಶಿಕ್ಷಕರು ರಸ್ತೆ ಅವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತಪಡಿಸಿದರು. ‘ಮಳೆ ಬಂದರೆ ನೀರು ನಿಲ್ಲುತ್ತದೆ ಎಂದು ಗೊತ್ತಿದ್ದರೂ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ನಿರ್ಲಕ್ಷ್ಯದಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಗತ್ಯ ಮುಂಜಾಗ್ರತಾ ಕ್ರಮಕೈಗೊಂಡಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಜಿಲ್ಲಾಧಿಕಾರಿ ಒಮ್ಮೆಯಾದರೂ ಇತ್ತ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಕರಿಂದ ಆಕ್ರೋಶ ವ್ಯಕ್ತವಾದ ನಂತರ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ಸ್ಥಳಕ್ಕೆ ಆಗಮಿಸಿ ರಸ್ತೆಯಲ್ಲಿ ನಿಂತಿದ್ದ ನೀರು ಹೊರ ಹಾಕಿದರು. ರಸ್ತೆಗೆ ಜಲ್ಲಿಕಲ್ಲು, ಮಣ್ಣು ಹಾಕಿ ಓಡಾಟಕ್ಕೆ ಅನುವು ಮಾಡಿಕೊಟ್ಟರು.

ತುಮಕೂರಿನ ಜೂನಿಯರ್ ಕಾಲೇಜಿನ ಮತಗಟ್ಟೆಗೆ ತೆರಳುವ ರಸ್ತೆಯಲ್ಲಿ ಮಳೆ ನೀರು ನಿಂತು ಕರೆಸರುಮಯವಾಗಿದ್ದು ಮತದಾರರು ಪರದಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.