ವೈ.ಎನ್.ಹೊಸಕೋಟೆ (ತುಮಕೂರು): ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ಸಿಗದೆ ತಮ್ಮ ತಂದೆಯ ಶವವನ್ನು ಸಹೋದರರು ಬೈಕ್‌ನಲ್ಲೇ ಸಾಗಿಸಿದ ಅಮಾನವೀಯ ಘಟನೆ ನಡೆದಿದೆ.
ವೈ.ಎನ್.ಹೊಸಕೋಟೆ ಹೋಬಳಿ ದಳವಾಯಿ ಗ್ರಾಮದ ಗುಡುಕಲ್ಲು ಹೊನ್ನೂರಪ್ಪ (80) ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಬುಧವಾರ ಮಧ್ಯಾಹ್ನ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ವೈದ್ಯರು ಪರಿಶೀಲಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದರು.
ಮೃತದೇಹ ಸಾಗಿಸಲು ಹೊನ್ನೂರಪ್ಪ ಮಗ ಗೋಪಾಲಪ್ಪ ಆಂಬುಲೆನ್ಸ್ ವಾಹನದ ಬಗ್ಗೆ ಕೇಂದ್ರದಲ್ಲಿ ವಿಚಾರಿಸಿದ್ದು, ವಾಹನ ಇಲ್ಲದಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ‘108’ ಆಂಬುಲೆನ್ಸ್‌ಗೆ ಕರೆ ಮಾಡಿದ್ದು, ಚಾಲಕರು ‘ನಮಗೆ ಶವ ಸಾಗಿಸಲು ಅವಕಾಶ ಇಲ್ಲ’ ಎಂದು ಹೇಳಿದ್ದಾರೆ. ಇದರಿಂದ ದಿಕ್ಕು ತೋಚದಂತಾದ ಗೋಪಾಲಪ್ಪ ಹಾಗೂ ಅವರ ಸಹೋದರ ಆಸ್ಪತ್ರೆಯಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಗ್ರಾಮಕ್ಕೆ ಬೈಕ್‌ನಲ್ಲೇ ಮೃತದೇಹ ಸಾಗಿಸಿದ್ದಾರೆ.
‘ತಂದೆ ಸಾವು ಒಂದು ಕಡೆಯಾದರೆ, ಕೊನೆಯ ಕ್ಷಣದಲ್ಲಿ ಗೌರವಯುತವಾಗಿ ಬೀಳ್ಕೊಡಲು ಆಗುತ್ತಿಲ್ಲ’ ಎಂಬ ಕೊರಗಿನಿಂದಲೇ ಗೋಪಾಲಪ್ಪ ತಮ್ಮ ತಂದೆಯ ಮೃತದೇಹವನ್ನು ಭುಜದ ಮೇಲೆ ಹೊತ್ತು, ಕಣ್ಣೀರು ಸುರಿಸುತ್ತ ಆಸ್ಪತ್ರೆಯಿಂದ ಹೊರ ಬಂದರು. ಸಹೋದರನ ಜತೆಗೆ ಬೈಕ್‌ನಲ್ಲಿ ಶವ ಸಾಗಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.
‘ಇಂತಹ ಪರಿಸ್ಥಿತಿ ಮತ್ತೊಬ್ಬರಿಗೆ ಬರಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಬದುಕಿದ್ದಾಗ ಉತ್ತಮ ಚಿಕಿತ್ಸೆ ಸಿಗುವುದಿಲ್ಲ. ಸತ್ತಮೇಲಾದರೂ ಕನಿಷ್ಠ ಸೌಲಭ್ಯ ಕೊಡಿ. ನೀವು ಮನುಷ್ಯರು ಎಂಬುವುದನ್ನು ಮರೆಯದಿರಿ’ ಎಂದು ಆಸ್ಪತ್ರೆಯಲ್ಲಿ ನೆರೆದಿದ್ದವರು ಆಂಬುಲೆನ್ಸ್ ವ್ಯವಸ್ಥೆ ಮಾಡದ ಸಿಬ್ಬಂದಿ, ವೈದ್ಯರಿಗೆ ಹಿಡಿಶಾಪ ಹಾಕಿದರು.
‘ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರ ಅವ್ಯವಸ್ಥೆಯಲ್ಲಿ ಮುಳುಗಿದೆ. ತುರ್ತು ಸಮಯದಲ್ಲಿ ಆಂಬುಲೆನ್ಸ್ ಸಿಗದೆ, ವೈದ್ಯರು ಇಲ್ಲದೆ ರೋಗಿಗಳು ನರಳುತ್ತಿದ್ದಾರೆ. ಇಂತಹ ಅವಘಡಗಳು ಪದೇ ಪದೇ ನಡೆಯುತ್ತಿದ್ದರೂ ಈ ಭಾಗದ ಜನಪ್ರತಿನಿಧಿಗಳು, ಶಾಸಕರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಗಡಿಭಾಗ ಎಂಬ ಕಾರಣಕ್ಕೆ ಅಧಿಕಾರಿಗಳು ಸಹ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಈಗಲಾದರೂ ಆಸ್ಪತ್ರೆಗೆ ಕನಿಷ್ಠ ಸೌಲಭ್ಯ ಕಲ್ಪಿಸಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.