ADVERTISEMENT

ಪಾವಗಡ | ಸ್ಮಶಾನ ವಿವಾದ: ರಸ್ತೆಯಲ್ಲಿಯೇ ಸಂಸ್ಕಾರ

ಕ್ಯಾತಗಾನಹಳ್ಳಿಗೆ ತಹಶೀಲ್ದಾರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2023, 7:45 IST
Last Updated 20 ಸೆಪ್ಟೆಂಬರ್ 2023, 7:45 IST
ಪಾವಗಡ ತಾಲ್ಲೂಕು ಕ್ಯಾತಗಾನಹಳ್ಳಿ ಬಳಿ ಜಮೀನಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಂತ್ಯಕ್ರಿಯೆ
ಪಾವಗಡ ತಾಲ್ಲೂಕು ಕ್ಯಾತಗಾನಹಳ್ಳಿ ಬಳಿ ಜಮೀನಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಂತ್ಯಕ್ರಿಯೆ   

ಪಾವಗಡ: ತಾಲ್ಲೂಕಿನ ಕ್ಯಾತಗಾನಹಳ್ಳಿ ಬಳಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲು ಅಡ್ಡಿಪಡಿಸಿದ್ದರಿಂದ ಜಮೀನಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿಯೇ ಅಂತ್ಯಕ್ರಿಯೆ ನಡೆಸಲಾಗಿದೆ.

ಗ್ರಾಮದ ಈರಣ್ಣ (65) ಅನಾರೋಗ್ಯದಿಂದಾಗಿ ಭಾನುವಾರ ಮೃತಪಟ್ಟಿದ್ದರು. ಗ್ರಾಮದ ರಾಜಕಾಲುವೆ ಬಳಿ ಅಂತ್ಯಕ್ರಿಯೆ ನಡೆಸಲು ಕುಟುಂಬ ಸದಸ್ಯರು ಮುಂದಾಗಿದ್ದರು. ರಾಜಕಾಲುವೆಗೆ ಹೊಂದಿಕೊಂಡಿರುವ ಜಮೀನುಗಳ ಮಾಲೀಕರು, ‘ಇದು ನಮ್ಮ ಜಮೀನು ಇಲ್ಲಿ ಅಂತ್ಯಕ್ರಿಯೆ ನಡೆಸಬೇಡಿ’ ಎಂದು ಅಡ್ಡಪಡಿಸಿದ್ದಾರೆ. ಎಷ್ಟು ಕೇಳಿಕೊಂಡರೂ ಅಂತ್ಯಸಂಸ್ಕಾರ ಮಾಡಲು ಅವಕಾಶ ನೀಡಿರಲಿಲ್ಲ.

ಇದರಿಂದ ಬೇಸರಗೊಂಡ ಈರಣ್ಣ ಅವರ ಸಂಬಂಧಿಕರು ಗ್ರಾಮದಿಂದ ಜಮೀನಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿಯೇ ಅಂತ್ಯ ಸಂಸ್ಕಾರ ಮಾಡಿದ್ದಾರೆ.

ADVERTISEMENT

‘ರಾಜಕಾಲುವೆ, ಕರಾಬು ಸ್ಥಳವನ್ನು ಜಮೀನುಗಳ ಮಾಲೀಕರು ಒತ್ತುವರಿ ಮಾಡಿಕೊಂಡು ಇದೀಗ ಅಂತ್ಯಕ್ರಿಯೆ ನಡೆಸಲು ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಎಲ್ಲಿ ಅಂತ್ಯ ಸಂಸ್ಕಾರ ಮಾಡಬೇಕು ಎಂಬ ಆತಂಕ ಕಾಡುತ್ತಿದೆ. ಮೃತದೇಹ ತಂದಾಗ ಗಲಾಟೆ ಮಾಡುವುದರಿಂದ ಸಂಬಂಧಿಕರು, ಕುಟುಂಬ ಸದಸ್ಯರಿಗೆ ನೆಮ್ಮದಿಯಾಗಿ ಅಂತ್ಯಕ್ರಿಯೆ ಮಾಡಲೂ ಸಾಧ್ಯವಾಗುತ್ತಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಿದವರ ವಿರುದ್ಧ ಅರಸೀಕೆರೆ ಪೊಲೀಸ್ ಠಾಣೆಗೆ ಮೃತರ ಸಂಬಂಧಿಕರು ದೂರು ನೀಡಿದ್ದಾರೆ.

ತಹಶೀಲ್ದಾರ್ ವರದರಾಜು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ, ‘ರಾಜಕಾಲುವೆ, ಕರಾಬು ಸ್ಥಳದ ಸರ್ವೆ ನಡೆಸಲಾಗುವುದು. ಸರ್ಕಾರಿ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡಲು ಅಡ್ಡಿಪಡಿಸಿದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.