ADVERTISEMENT

ಸಂಸದರಿಗೆ ತೆರೆದ ‘ಹಟ್ಟಿ’ ಬಾಗಿಲು

ಪಾವಗಡ ತಾಲ್ಲೂಕಿನ ಪೆಮ್ಮನಹಳ್ಳಿ ಗೊಲ್ಲರ ಹಟ್ಟಿಯಲ್ಲಿ ‘ಪುನಃ ಪುರಪ್ರವೇಶ’

ಪೀರ್‌ ಪಾಶ, ಬೆಂಗಳೂರು
Published 23 ಸೆಪ್ಟೆಂಬರ್ 2019, 19:45 IST
Last Updated 23 ಸೆಪ್ಟೆಂಬರ್ 2019, 19:45 IST
ಹೂ ಎರಚಿ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಸಂಸದ ಎ.ನಾರಾಯಣಸ್ವಾಮಿ ಅವರನ್ನು ಬರಮಾಡಿಕೊಳ್ಳಲಾಯಿತು. ಕೃಷ್ಣ ಯಾದವಾನಂದ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಪುರುಷೋತ್ತಮಾನಂದಪುರಿ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶಾಸಕಿ ಪೂರ್ಣಿಮಾ ಇದ್ದರು.
ಹೂ ಎರಚಿ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಸಂಸದ ಎ.ನಾರಾಯಣಸ್ವಾಮಿ ಅವರನ್ನು ಬರಮಾಡಿಕೊಳ್ಳಲಾಯಿತು. ಕೃಷ್ಣ ಯಾದವಾನಂದ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಪುರುಷೋತ್ತಮಾನಂದಪುರಿ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶಾಸಕಿ ಪೂರ್ಣಿಮಾ ಇದ್ದರು.   

ಪಾವಗಡ: ಪೊಲೀಸರ ಭದ್ರತೆಯಲ್ಲಿ ವಿವಿಧ ಮಠಾಧೀಶರು ಹಾಗೂ ಸ್ಥಳೀಯ ಮುಖಂಡರ ಜತೆಗೂಡಿ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಅವರು ಪೆಮ್ಮನಹಳ್ಳಿಯ ಗೊಲ್ಲರಹಟ್ಟಿಗೆ ಸೋಮವಾರ ಭೇಟಿ ನೀಡಿದರು.

ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ, ರಾಜ್ಯ ಯಾದವ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ‘ಪುನಃ ಪುರಪ್ರವೇಶ’ ಮತ್ತು ‘ಮಠಾಧೀಶರಿಂದ ಸಾಮರಸ್ಯದ ನಡಿಗೆ’ಯಲ್ಲಿ ಅವರು ಉತ್ಸಾಹದಿಂದ ಪಾಲ್ಗೊಂಡರು.

ಸಂಸದರನ್ನು ಹಟ್ಟಿಯ ಬಹುತೇಕ ವಾಸಿಗಳು ಸಂತಸದಿಂದಲೇ ಬರಮಾಡಿಕೊಂಡರು. ಸ್ವಾಗತಕ್ಕೆ ಬಾಳೆ ಕಂದು, ಮಾವಿನ, ಸಂಪಿಗೆ ಹೂ-ಹಾರಗಳ ತೋರಣಗಳನ್ನು ಕಟ್ಟಲಾಗಿತ್ತು.

ADVERTISEMENT

ಹೆಣ್ಣು ಮಕ್ಕಳು ಪೂರ್ಣಕುಂಭ ಹೊತ್ತು ಅತಿಥಿಗಳನ್ನು ಬರಮಾಡಿಕೊಂಡರೆ, ವಿದ್ಯಾರ್ಥಿಗಳು ಚೆಂಡು ಹೂವಿನ ದಳಗಳನ್ನು ಚೆಲ್ಲುತ್ತ ‘ಹೂ-ಹಾಸಿಗೆ’ ನಿರ್ಮಿಸಿದ್ದರು. ಇದರೊಟ್ಟಿಗೆ ಹಟ್ಟಿ ನಿವಾಸಿಗಳಿಬ್ಬರ ಅರೆ ವಾದ್ಯದ ನಾದವೂ ಮೇಳೈಸಿತ್ತು.

ಅಡಿಗಡಿಗೂ ಯುವಕರು ಬಂದು ಸಂಸದರ ಕೈಕುಲುಕಿ ಶುಭ ಕೋರುತ್ತಿದ್ದರು. ಅವರೊಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹಾತೊರೆಯುತ್ತಿದ್ದರು.

ಈ ‘ಪುರ ಪ್ರವೇಶ ಪ್ರಸಂಗ’ವನ್ನು ಮಧ್ಯವಯಸ್ಕರು ಬೀದಿಯ ಇಕ್ಕೆಲಗಳಲ್ಲಿ ನಿಂತು ಕುತೂಹಲದಿಂದ ನೋಡುತ್ತಿದ್ದರೆ, ‘ಹಿರಿ ತಲೆಗಳು’ ಹುಣಸೆ ಮರಗಳ ಕೆಳಗೆ ಕುಳಿತು ವಾರೆನೋಟ ಬೀರುತ್ತಿದ್ದವು. ಹಿರಿಯರ ಮೊಗದಲ್ಲಿ ಆತಂಕದ ಎಳೆಯೊಂದು ಮೂಡಿದಂತಿತ್ತು.

ಹಟ್ಟಿಯ ಮಧ್ಯದಲ್ಲಿನ ಸಿದ್ದೇಶ್ವರ- ಈರಣ್ಣ- ತಿಮ್ಮಪ್ಪ ದೇವಾಲಯದ ಮುಂಭಾಗ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಹಟ್ಟಿಯ ಯುವಕರು ಮತ್ತು ಸುತ್ತಲಿನ ಗ್ರಾಮಸ್ಥರೇ ಹೆಚ್ಚು ಸೇರಿದ್ದರು.

ಸಂಸದ ಎ.ನಾರಾಯಣಸ್ವಾಮಿ, ‘ಪ್ರವೇಶ ನಿರಾಕರಣೆ ಪ್ರಸಂಗ ಉದ್ದೇಶಪೂರ್ವಕವಾಗಿ ನಡೆದಿಲ್ಲ ಎಂಬುದು ನನಗೆ ಗೊತ್ತು. ಆ ದಿನ ನನ್ನೊಂದಿಗೆ ಯಾರೂ ದಬ್ಬಾಳಿಕೆಯಿಂದ ಮಾತನಾಡಿಲ್ಲ. ಸಂಪ್ರದಾಯದ ಕುರಿತು ತಿಳಿಸಿದರು. ಅವರ ಮನಸ್ಸನ್ನು ಗೆಲ್ಲಲು ಒಂದಷ್ಟು ತಯಾರಿ ಮಾಡಿಕೊಂಡು ಬಂದಿದ್ದೇನೆ ಅಷ್ಟೇ’ ಎಂದರು.

‘ಎಲ್ಲ ಜಾತಿಗಳು ಅಂಧ ಸಂಪ್ರದಾಯಗಳಿಂದ ಹೊರಬರಬೇಕು. ಆಗ ಬದುಕು ಬದಲಾಗುತ್ತದೆ. ಮಕ್ಕಳ ಭವಿಷ್ಯವೂ ಉಜ್ವಲ ಆಗುತ್ತದೆ. ಚುನಾವಣೆಯಲ್ಲಿ ನನ್ನ ಸಮುದಾಯಕ್ಕಿಂತ ನೀವೇ ಹೆಚ್ಚು ಸಹಾಯ ಮಾಡಿದ್ದೀರಿ. ಅದಕ್ಕಾಗಿ ನಿಮ್ಮ ಕಷ್ಟ ಕೇಳಲು ಬಂದಿದ್ದೇನೆ. ಎಲ್ಲ ಹಟ್ಟಿಗಳಿಗೂ ಒಳ್ಳೆಯದನ್ನು ಮಾಡುವ ಪ್ರಯಾಣವನ್ನು ಇಲ್ಲಿಂದ ಆರಂಭಿಸಿದ್ದೇನೆ, ಸಹಕರಿಸಿ ಎಂದು ಮನವಿ ಮಾಡಿದ ಅವರು, ಸಮುದಾಯಗಳ ನಡುವೆ ಕಂದಕ ಸೃಷ್ಟಿಸಿ ಲಾಭ ಪಡೆಯಲು ಕೆಲವರು ಲೆಕ್ಕಾಚಾರ ಹಾಕುತ್ತಿದ್ದಾರೆ. ಅದನ್ನೆಲ್ಲಾ ನೀವು ಅರಿತುಕೊಳ್ಳಬೇಕು’ ಎಂದು ಹೇಳಿದರು.

ಚಿತ್ರದುರ್ಗ ಯಾದವ ಮಠದ ಕೃಷ್ಣ ಯಾದವಾನಂದ ಸ್ವಾಮೀಜಿ, ‘ದಲಿತ ಸಂಘಟನೆಗಳು ಹಟ್ಟಿಗೆ ಆವೇಶಭರಿತವಾಗಿ ಬರಬಾರದು’ ಎಂದು ಕಿವಿಮಾತು ಹೇಳಿದರು. ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ‘ಮೂಲ ನಂಬಿಕೆಗಳನ್ನು ಪಾಲಿಸಿ, ಮೂಢನಂಬಿಕೆಗಳನ್ನು ಬಿಡಿ’ ಎಂದು ಸಲಹೆ ನೀಡಿದರು.

ದಲಿತರು ಎನ್ನುವ ಕಾರಣಕ್ಕೆ ಸೆ.16ರಂದು ನಾರಾಯಣಸ್ವಾಮಿ ಅವರನ್ನು ಗೊಲ್ಲರಹಟ್ಟಿಗೆ ಬರದಂತೆ ಅಲ್ಲಿನ ಜನರು ತಡೆದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

***

ನಾನು ಬುಲ್ಡೋಜರ್ ಇದ್ದ ಹಾಗೆ. ಒಳಿತು ಮಾಡುವ ಕೆಲಸಗಳಿಗೆ ಅಡ್ಡ ಬಂದವರ ಬಗ್ಗೆ ಕೇರ್ ಮಾಡುವುದಿಲ್ಲ, ನುಗ್ಗುತ್ತಿರುತ್ತೇನೆ.

-ಎ.ನಾರಾಯಣಸ್ವಾಮಿ,ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.