ಪಾವಗಡ: ಸೋಲಾರ್ ಪಾರ್ಕ್‌ನಲ್ಲಿ ತಾಲ್ಲೂಕಿನ ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಶುಕ್ರವಾರವೂ ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳು ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಧರಣಿ ಮುಂದುವರೆಸಿದರು.
ಸೋಲಾರ್ ಪಾರ್ಕ್ ಆರಂಭಿಸುವ ಮುನ್ನ ಸಚಿವರು, ಅದಿಕಾರಿಗಳು 8ರಿಂದ 10 ಸಾವಿರ ಮಂದಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೆ ಸ್ಥಳೀಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ನೀಡುತ್ತಿಲ್ಲ. ಇದರಿಂದ ಇಲ್ಲಿನ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ವಿಶ್ವದ ಬೃಹತ್ ಸೊಲಾರ್ ಪಾರ್ಕ್ ಎಂಬ ಹೆಗ್ಗಳಿಕೆ ಹೊಂದಿದ್ದರೂ, ಸ್ಥಳೀಯರು ಕೆಲಸ ಅರಸಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇತರೆ ರಾಜ್ಯಗಳ ಜನತೆಗೆ ಕೆಲಸ ನೀಡಲಾಗುತ್ತಿದೆ. ಸ್ಥಳೀಯರನ್ನು ಕಡೆಗಣಿಸಲಾಗುತ್ತಿದೆ. ಜೊತೆಗೆ ಸ್ವಚ್ಛತೆ ಸೇರಿದಂತೆ ನಿರ್ವಹಣೆಗೆ ರೊಬೊ ಯಂತ್ರ ಬಳಸುತ್ತಿರುವುದರಿಂದ ಯುವ ಜನರು ಕೆಲಸದಿಂದ ವಂಚಿತರಾಗುತ್ತಿದ್ದಾರೆ ಎಂದು ಪ್ರತಿಭಟನನಿರತರು ಆರೋಪಿಸಿದರು.
ಸರ್ಕಾರ ಈ ಕೂಡಲೇ ಸೋಲಾರ್ ಪಾರ್ಕ್‌ನಲ್ಲಿ ಯುವ ಜನರಿಗೆ ಕನಿಷ್ಠ ಐದು ಸಾವಿರ ಮಂದಿಗೆ ಉದ್ಯೋಗಾವಕಾಶ ನೀಡಬೇಕು. ವಲಸೆ ಹೋಗುವುದನ್ನು ನಿಯಂತ್ರಿಸಲು ಇತರೆ ಸಣ್ಣ ಕೈಗಾರಿಕೆಗಳನ್ನು ನಿರ್ಮಿಸುವತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ಹನುಮಂತರಾಯ, ತಾಲ್ಲೂಕು ಅದ್ಯಕ್ಷ ವದನಕಲ್ಲು ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಕುಮಾರ್, ಉಪಾಧ್ಯಕ್ಷ ಡಿ.ಟಿ. ನರಸಿಂಹ ಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.