ADVERTISEMENT

ಪಾವಗಡ | ತಾಪಮಾನ ಹೆಚ್ಚಳ; ಮೇವು, ನೀರಿನ ಕೊರತೆ

ಮೇವಿನ ಬೆಲೆ ದುಪ್ಪಟ್ಟು, ಕೈಚೆಲ್ಲಿ ಕುಳಿತ ರೈತರು, ಬಡಕಲಾದ ದನಕರುಗಳು

ಕೆ.ಆರ್.ಜಯಸಿಂಹ
Published 19 ಮಾರ್ಚ್ 2024, 6:00 IST
Last Updated 19 ಮಾರ್ಚ್ 2024, 6:00 IST
ಪಾವಗಡ ತಾಲ್ಲೂಕಿನ ನಿಡಗಲ್ ಹೋಬಳಿಯ ಜಮೀನಿನ ಬಳಿ ಕುರಿ ಮೇಕೆಗಳು ಮೇವಿಗಾಗಿ ಹುಡುಕಾಡುತ್ತಿರುವುದು
ಪಾವಗಡ ತಾಲ್ಲೂಕಿನ ನಿಡಗಲ್ ಹೋಬಳಿಯ ಜಮೀನಿನ ಬಳಿ ಕುರಿ ಮೇಕೆಗಳು ಮೇವಿಗಾಗಿ ಹುಡುಕಾಡುತ್ತಿರುವುದು   

ಪಾವಗಡ: ತಾಲ್ಲೂಕಿನಾದ್ಯಂತ ಬರದ ತೀವ್ರತೆ ಹೆಚ್ಚಿದೆ. ಜಾನುವಾರುಗಳು ಹಾಗೂ ವನ್ಯ ಜೀವಿಗಳು ನೀರು, ಆಹಾರಕ್ಕಾಗಿ ಪರಿತಪಿಸುತ್ತಿವೆ. ದಶಕಗಳಿಂದ ಕಾಪಾಡಿಕೊಂಡು ಬಂದಿರುವ ತೋಟಗಳನ್ನು ಉಳಿಸಿಕೊಳ್ಳಲು ರೈತರು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.

ಇಡೀ ರಾಜ್ಯದಲ್ಲಿಯೇ ದಶಕಗಳ ಕಾಲ ತೀವ್ರ ಬರಕ್ಕೆ ತುತ್ತಾಗುತ್ತಿರುವ ಪಾವಗಡ ತಾಲ್ಲೂಕಿಗೆ ಯಾವುದೇ ನದಿ ಮೂಲವಿಲ್ಲ. ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಕಾಮಗಾರಿಗಳು ಆಮೆ ಗತಿಯಲ್ಲಿ ಸಾಗುತ್ತಿವೆ. ತುಂಗಭದ್ರಾ ಕುಡಿಯುವ ನೀರಿನ ಯೋಜನೆಯೂ ಪೂರ್ಣಗೊಂಡಿಲ್ಲ. ಕೃಷಿ ಚಟುವಟಿಕೆ, ಹೈನುಗಾರಿಕೆಯನ್ನೇ ನಂಬಿರುವವರು, ಕುರಿಗಾಹಿಗಳು ನಿರಂತರವಾಗಿ ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ.

ಫ್ಲೋರೈಡ್ ನೀರಿನ ಸಮಸ್ಯೆ ಪರಿಹರಿಸಲು ನಿರ್ಮಿಸಲಾದ ಡಿ ಫ್ಲೋರೈಡ್ ಘಟಕಗಳು ನೀರಿನ ಪೂರೈಕೆಯಿಲ್ಲದೆ ಕೆಲಸ ಮಾಡುತ್ತಿಲ್ಲ. ಕೆಲವೆಡೆ ನೀರು ಪೂರೈಕೆ ಮಾಡಿದರು ತಾಂತ್ರಿಕ ಸಮಸ್ಯೆಯಿಂದಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾದ ಘಟಕಗಳು ವ್ಯರ್ಥವಾಗಿವೆ.

ADVERTISEMENT

ಹಿಂದೆಂದೂ ಕಂಡರಿಯದ ಮೇವಿನ ಅಭಾವವನ್ನು ರೈತರು ಎದುರಿಸುತ್ತಿದ್ದಾರೆ. ಎಮ್ಮೆ, ಹಸು, ಎತ್ತುಗಳು ಮೇವಿಲ್ಲದೆ ಬಡಕಲಾಗಿವೆ. ಮೇವಿನ ಬೆಲೆ ದುಪ್ಪಟ್ಟಾಗಿದೆ. ಸಾಲ ಸೋಲ ಮಾಡಿಯಾದರೂ ಮೇವು ಕೊಳ್ಳೋಣ ಎಂದರೂ ಮೇವು ಸಿಗುತ್ತಿಲ್ಲ. ತಾಲ್ಲೂಕಿನ ಶೈಲಾಪುರ, ಕೋಟಗುಡ್ಡ ಸೇರಿದಂತೆ ಕೆಲ ಗ್ರಾಮಗಳಲ್ಲಿ ಜಾನುವಾರುಗಳನ್ನು ಒಟ್ಟಾಗಿ ಬೆಟ್ಟಗುಡ್ಡಗಳಲ್ಲಿ ಮೇಯಿಸುವ ಪದ್ದತಿ ಇದೆ. ಇಂತಹ ರಾಸುಗಳಿಗಾಗಿ ಮೇವು ಸಂಗ್ರಹಿಸುವುದಿಲ್ಲ. ಅವು ಕೇವಲ ಹಗಲ ವೇಳೆ ಬೆಟ್ಟಗುಡ್ಡಗಳಲ್ಲಿ ಓಡಾಡಿಕೊಂಡು ಹೊಟ್ಟೆ ತುಂಬಿಸಬೇಕು. ಅಲ್ಲಿಯೇ ನೀರು ಕುಡಿಯಬೇಕು. ಆದರೆ ಬೆಟ್ಟ ಗುಡ್ಡಗಳಲ್ಲಿ ಮೇವು, ನೀರಿಲ್ಲ. ಇಂತಹ ಜಾನುವಾರುಗಳ ಸ್ಥಿತಿ ಹೇಳತೀರದು.

ತಾಲ್ಲೂಕಿನ ನಿಡಗಲ್, ಕರಿಯಮ್ಮನಪಾಳ್ಯ, ಕೋಟಗುಡ್ಡ, ಕೊಡಮಡುಗು ಸೇರಿದಂತೆ ವಿವಿಧ ಅರಣ್ಯ ಪ್ರದೇಶಗಳಲ್ಲಿ ಕರಡಿ, ಕೃಷ್ಣಮೃಗ, ಚಿರತೆ, ನವಿಲುಗಳ ಸಂಖ್ಯೆ ಹೆಚ್ಚಿದೆ. ಕಾಡಿನಲ್ಲಿ ನೀರು, ಆಹಾರ ಸಿಗದೆ ತೋಟ, ಹೊಲ ಗದ್ದೆ, ಗ್ರಾಮಗಳತ್ತ ಕರಡಿಗಳು ಆಗಮಿಸುತ್ತಿವೆ. ನವಿಲುಗಳು ನೀರು ಆಹಾರ ಸಿಗುವ ತೋಟಗಳನ್ನು ಆವಾಸ ಸ್ಥಾನವಾಗಿ ಬದಲಿಸಿಕೊಂಡಿವೆ.

₹ 50 ಸಾವಿರ ದಿಂದ ₹ 1 ಲಕ್ಷ ಕೊಟ್ಟು ಖರೀದಿಸಿದ ಎಚ್ಎಫ್, ಜರ್ಸಿ, ಆಲ್ ಬ್ಲಾಕ್‌ನಂಥ ಹಸುಗಳನ್ನೂ ಸಹ ಬಿಸಿಲಿನಲ್ಲಿ ಓಡಾಡಿಸಲಾಗುತ್ತಿದೆ. ಅವುಗಳಿಗೂ ಮೇವು ಪೂರೈಸಲಾಗದೆ ಹೈನುಗಾರಿಕೆಯನ್ನೇ ನಂಬಿಕೊಂಡಿರುವ ರೈತರು ಕೈ ಚೆಲ್ಲಿ ಕೂತಿದ್ದಾರೆ.

ತಾಲ್ಲೂಕಿನಾದ್ಯಂತ 34 ರಿಂದ 37 ಡಿಗ್ರಿಯಷ್ಟು ತಾಪಮಾನ ಇದೆ. ಹಗಲಿನಲ್ಲಿ ಓಡಾಡಲೂ ಸಾಧ್ಯವಾಗುತ್ತಿಲ್ಲ. ಸೋಲಾರ್ ಪಾರ್ಕ್ ನಿರ್ಮಾಣವಾಗಿರುವ ನಾಗಲಮಡಿಕೆ ಹೋಬಳಿಯಲ್ಲಿ ತಾಪಮಾನ ಇನ್ನೂ ಹೆಚ್ಚಿದೆ. 

ಅಂತರ್ಜಲಮಟ್ಟ ಕಡಿಮೆಯಾಗುತ್ತಿರುವುದರಿಂದ ತೆಂಗು, ಅಡಿಕೆ, ಬಾಳೆ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅಲ್ಪಾವಧಿ ಬೆಳೆಗಳನ್ನು ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಯಾವಾಗ ಕೊಳವೆ ಬಾವಿಯ ನೀರು ನಿಂತು ಹೋಗುತ್ತದೆಯೇ ಎಂಬ ಆತಂಕದಲ್ಲಿ ರೈತರಿದ್ದಾರೆ.

ಪಾವಗಡ ತಾಲ್ಲೂಕಿನ ನ್ಯಾಯದಗುಂಟೆ ಬಳಿ ಕುರಿ ಮೇಕೆಗಳು ಮೇವಿಗಾಗಿ ಪರದಾಡುತ್ತಿರುವುದು
ಪಾವಗಡ ತಾಲ್ಲೂಕಿನ ಕೋಡಿಗೆಹಳ್ಳಿ ಬಳಿ ಕುರಿಗಳು ಜಮೀನಿನಲ್ಲಿ ಕಟಾವು ಮಾಡಿದ ಜಮೀನಿನೊಳಗೆ ಮೇಯುತ್ತಿರುವುದು.
ಪಾವಗಡ ತಾಲ್ಲೂಕಿನ ನ್ಯಾಯದಗುಂಟೆ ಬಳಿ ಕೆಂಪಣ್ಣ ಎಂಬುವರ ಸಾವಿರಾರು ಬೆಲೆಯ ಮಿಶ್ರ ತಳಿಯ ಹಸುಗಳನ್ನು ಬಿಸಿಲಿನಲ್ಲಿ ಒಣಮೇವು ಮೇಯಿಸುತ್ತಿರುವುದು.
ಪಾವಗಡ ತಾಲ್ಲೂಕಿನ ಅರಸೀಕೆರೆ ಬಳಿ ನೀರಿನ ಅಭಾವದಿಂದಾಗಿ ಗುಂಡಿಯಲ್ಲಿ ನಿಂತಿರುವ ಕೊಳಚೆ ನೀರನ್ನು ಕುಡಿಯುತ್ತಿರುವ ಕುರಿಗಳು

ನೀರು ಮೇವಿಲ್ಲದೆ ಜಾನುವಾರುಗಳನ್ನು ಮಾರಾಟ ಮಾರುವ ಅನಿವಾರ್ಯತೆ ಇದೆ. ಎಲ್ಲಿಯೂ ಮೇವು ಇಲ್ಲ. ಕೊಳ್ಳಲು ಶಕ್ತಿ ಇಲ್ಲ. ಮೂಕ ಪ್ರಾಣಿಗಳ ವೇದನೆ ಯಾರಿಗೆ ಹೇಳಿಕೊಳ್ಳಬೇಕು

-ರಾಮಪ್ಪ ರೈತ ಕೊಡಿಗೇಹಳ್ಳಿ

20 ಹಸುಗಳಿವೆ. ಮೇವಿಲ್ಲದ ಕಾರಣ ಓಡಾಡಿಸಿಕೊಂಡು ಕೊಟ್ಟಿಗೆಯಲ್ಲಿ ಕೂಡಲಾಗುತ್ತಿದೆ. ಹಸುಗಳು ಬಡಕಲಾಗುತ್ತಿವೆ. ಮೇವು ಸಿಕ್ಕರೆ ಮಳೆ ಬಂದರೆ ಇವುಗಳನ್ನು ಉಳಿಸಿಕೊಳ್ಳಬಹುದು.

-ಕೆಂಪಣ್ಣ ರೈತ ನ್ಯಾಯದಗುಂಟೆ

ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿದೆ. ದಶಕಗಳಿಂದ ಮನೆ ಮಕ್ಕಳಂತೆ ಬೆಳೆಸಿರುವ ತೆಂಗು ಅಡಿಕೆ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋಗಬೇಕಿದೆ. ಸುಳಿ ಒಣಗಿದರೆ ಇಷ್ಟು ವರ್ಷಗಳ ಪರಿಶ್ರಮ ವ್ಯರ್ಥವಾಗುತ್ತದೆ. ಮತ್ತೆ ತೋಟ ಕಟ್ಟಲು ಹತ್ತಾರ ವರ್ಷ ಬೇಕಾಗುತ್ತದೆ. ಇನ್ನೂ ಬೇಸಿಗೆ ಮುಗಿಯುವವರೆಗೆ ಆತಂಕ ತಪ್ಪಿದ್ದಲ್ಲ.

-ಬಾಲರಾಜು ರೈತ ಬೂದಿಬೆಟ್ಟ

ವನ್ಯಜೀವಿಗಳ ಕುಡಿಯುವ ನೀರಿಗಾಗಿ ತಾಲ್ಲೂಕಿನ ಸಾಸಲಕುಂಟೆ ನಿಡಗಲ್ ಅರಣ್ಯ ಪ್ರದೇಶದಲ್ಲಿ ಸಿಮೆಂಟ್ ಕಟ್ಟೆ ನಿರ್ಮಿಸಿ ನೀರು ತುಂಬಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಕರಡಿಗಳಿಗೆ ಕಾಡಿನೊಳಗೇ ಆಹಾರ ಪೂರೈಸಲು ಅನುಕೂಲವಾಗುವ ಯೋಜನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.

-ರಾಕೇಶ್ ವಲಯ ಅರಣ್ಯಾಧಿಕಾರಿ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ತೊಟ್ಟಿಗಳಿಗೆ ನೀರು ಬಿಡಬೇಕು. ಇಲ್ಲವಾದಲ್ಲಿ ನೂತನವಾಗಿ ನಿರ್ಮಿಸಿ ನೀರಿನ ವ್ಯವಸ್ಥೆ ಮಾಡುವಂತೆ ಪಿಡಿಒಗಳಿಗೆ ಪತ್ರ ಬರೆಯಲಾಗಿದೆ. ಶೀಘ್ರ ಮೇವು ಬ್ಯಾಂಕ್ ಆರಂಭಿಸಲಾಗುವುದು.

-ವರಕೇರಪ್ಪ ಸಹಾಯಕ ನಿರ್ದೇಶಕ ಪಶು ಇಲಾಖೆ

ಸಾಕು ಪ್ರಾಣಿಗಳ ಸಂಖ್ಯೆ

ದನಗಳ ಸಂಖ್ಯೆ-30500

ಎಮ್ಮೆಗಳ ಸಂಖ್ಯೆ-14000

ಕುರಿ ಮೇಕೆ – 2.10 ಲಕ್ಷ

ವನ್ಯಜೀವಿಗಳ ಸಂಖ್ಯೆ

ಕರಡಿ- 150

ಚಿರತೆ- 60

ಕೃಷ್ಣಮೃಗ- 4000

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.