ADVERTISEMENT

95 ಮಂದಿಗೆ ಮಾಸಾಶನ ಮಂಜೂರಾತಿ ಪತ್ರ ವಿತರಣೆ

ಮಧುಗಿರಿ ತಾಲ್ಲೂಕಿನ ಚಿಕ್ಕದಾಳವಟ್ಟ ಗ್ರಾಮದಲ್ಲಿ ಜನಸ್ಪಂದನ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 14:29 IST
Last Updated 11 ಜುಲೈ 2024, 14:29 IST
ಮಧುಗಿರಿ ತಾಲ್ಲೂಕು ಚಿಕ್ಕದಾಳವಟ್ಟ ಗ್ರಾಮದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ 95 ಮಂದಿಗೆ ಮಾಸಾಶನ ಮಂಜೂರಾತಿ ಆದೇಶ ಪತ್ರಗಳನ್ನು ಸಚಿವರಾದ ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ ವಿತರಿಸಿದರು
ಮಧುಗಿರಿ ತಾಲ್ಲೂಕು ಚಿಕ್ಕದಾಳವಟ್ಟ ಗ್ರಾಮದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ 95 ಮಂದಿಗೆ ಮಾಸಾಶನ ಮಂಜೂರಾತಿ ಆದೇಶ ಪತ್ರಗಳನ್ನು ಸಚಿವರಾದ ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ ವಿತರಿಸಿದರು   

ಮಧುಗಿರಿ: ತಾಲ್ಲೂಕಿನ ಚಿಕ್ಕದಾಳವಟ್ಟ ಗ್ರಾಮದಲ್ಲಿ ಬುಧವಾರ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ 95 ಮಂದಿಗೆ ವಿವಿಧ ಯೋಜನೆಯಡಿ ಮಾಸಾಶನ ಮಂಜೂರಾತಿ ಆದೇಶ ಪತ್ರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿತರಿಸಿದರು.

ಕಂದಾಯ ಇಲಾಖೆಗೆ ಸಾಗುವಳಿ ಚೀಟಿ ಆಧಾರದ ಮೇಲೆ ಖಾತೆ, ಪೌತಿ ಖಾತೆ, ಮನೆ, ಸಾಗುವಳಿ ಚೀಟಿ, ನಿವೇಶನ ಹಾಗೂ ಸರ್ಕಾರಿ ಜಾಗ ಒತ್ತುವರಿ ತೆರವು ಸೇರಿದಂತೆ 56 ಮಂದಿ ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಅರ್ಹರ ಮನೆ ಬಾಗಿಲಿಗೆ ಅಧಿಕಾರಿಗಳು ತಲುಪಿಸಬೇಕು. ಕಚೇರಿಗಳಿಗೆ ಜನರು ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಜನಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ADVERTISEMENT

ಮಧುಗಿರಿ, ಶಿರಾ, ಪಾವಗಡ ಮತ್ತು ಕೊರಟಗೆರೆ ಅತ್ಯಂತ ಹಿಂದುಳಿದ ತಾಲ್ಲೂಕುಗಳಾಗಿವೆ. ಈ ಭಾಗಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡುವ ಮೂಲಕ ಕೆರೆಗಳಿಗೆ ನೀರು ಹರಿಸಲು ಎತ್ತಿನಹೊಳೆ, ಹೇಮಾವತಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ ಫಲವಾಗಿ ಪಾವಗಡ ತಾಲ್ಲೂಕಿನ ಕೆರೆಗಳಿಗೆ ಕೆಲವೇ ದಿನಗಳಲ್ಲಿ ನೀರು ಹರಿಯಲಿದೆ. ಎರಡು ವರ್ಷಗಳಲ್ಲಿ ಮಧುಗಿರಿ ಮತ್ತು ಕೊರಟಗೆರೆ ತಾಲ್ಲೂಕಿನ ಕೆರೆಗಳಿಗೆ ಎತ್ತಿನ ಹೊಳೆ ನೀರು ಹರಿಯುತ್ತದೆ ಎಂದು ಭರವಸೆ ನೀಡಿದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಜಿಲ್ಲಾಧಿಕಾರಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿ ಬಳಿ ಕೇಬಲ್ ಕಾರ್ ಯೋಜನೆಯ ಬಗ್ಗೆ ಮಾಹಿತಿ ಕೇಳಿದ್ದು, ಆದಷ್ಟು ಬೇಗ ಪ್ರಕ್ರಿಯೆ ಮುಗಿಸುವಂತೆ ಸೂಚನೆ ನೀಡಿದ್ದಾರೆ. ಶೀಘ್ರ ಕಾಮಗಾರಿಗೆ ಚಾಲನೆ ನೀಡುವ ಮೂಲಕ 2025ರ ಜುಲೈ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

3,500 ಮನೆಗಳಿಗೆ ಫಲಾನುಭವಿಗಳನ್ನು ಗುರುತಿಸಿ ಕಾರ್ಯಾದೇಶ ವಿತರಿಸಲಾಗುತ್ತಿದೆ. ತಾಲೂಕಿನಲ್ಲಿ 5 ಸಾವಿರ ನಿವೇಶನ ವಿತರಿಸಲು 300 ಎಕರೆ ಸ್ಥಳ ಗುರುತಿಸಿದ್ದು, ನಿವೇಶನ ವಿತರಿಸಲಾಗುವುದು ಎಂದರು.‌

ಜಿಲ್ಲಾಧಿಕಾರಿ ಶುಭಕಲ್ಯಾಣ್, ಎಸ್.ಪಿ. ಅಶೋಕ್, ಉಪವಿಭಾಗಾಧಿಕಾರಿ ಗೋಟೋರು ಶಿವಪ್ಪ, ತಹಶೀಲ್ದಾರ್ ಸಿಗ್ಮತ್ ಉಲ್ಲಾ, ತಾ.ಪಂ.ಇಒ ಲಕ್ಷ್ಮಣ್, ಎಡಿಎ ಮಧುಸೂದನ್, ಜಿ.ಪಂ.ಇಇ ದಯಾನಂದ, ಸಿಡಿಪಿಒ ಕಮಲಮ್ಮ, ಗ್ರಾ.ಪಂ.ಅಧ್ಯಕ್ಷೆ ಲಲಿತಮ್ಮ, ಉಪಾಧ್ಯಕ್ಷೆ ಆಶಾರಾಣಿ ಹಾಗೂ  ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.