ತುಮಕೂರು: ಅಕ್ಷಯ ತೃತೀಯ ಪ್ರಯುಕ್ತ ಶುಕ್ರವಾರ ನಗರದ ಚಿನ್ನಾಭರಣ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು.
ಈ ಬಾರಿ ಬಸವ ಜಯಂತಿ ದಿನದಂದು ಅಕ್ಷಯ ತೃತೀಯ ಬಂದಿದ್ದು, ಹೆಚ್ಚಿನ ಸಂಖ್ಯೆಯ ಜನರು ಆಭರಣ ಖರೀದಿಸಿದ ದೃಶ್ಯಗಳು ಕಂಡು ಬಂದವು. ಸಾಮಾನ್ಯವಾಗಿ ಬೆಳಗ್ಗೆ 10.30 ಗಂಟೆಗೆ ಆರಂಭವಾಗುತ್ತಿದ್ದ ಮಳಿಗೆಗಳು ಶುಕ್ರವಾರ ಬೆಳಗ್ಗೆ 7 ಗಂಟೆಯಿಂದಲೇ ತೆರೆದಿದ್ದವು. ಮಳಿಗೆಗಳು ಸಾರ್ವಜನಿಕರಿಂದ ತುಂಬಿದ್ದವು.
ವಿವಿಧ ಮಳಿಗೆಗಳಲ್ಲಿ ಹೆಚ್ಚಿನ ಜನ ಸಂದಣಿ ಇತ್ತು. ಈ ದಿನ ಚಿನ್ನ, ಬೆಳ್ಳಿಯ ಆಭರಣ ಖರೀದಿಸಿದರೆ ಮನೆಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಇದೇ ಕಾರಣಕ್ಕೆ ಅಕ್ಷಯ ತೃತೀಯ ದಿನ ಕನಿಷ್ಠ ಒಂದು ಗ್ರಾಂ ಚಿನ್ನವಾದರೂ ಖರೀದಿಸಬೇಕು ಎಂಬ ಉದ್ದೇಶದಿಂದ ಜನರು ಮಳಿಗೆಯತ್ತ ದೃಷ್ಟಿ ನೆಟ್ಟಿದ್ದರು.
ಚಿನ್ನದ ಬೆಲೆ ದಿನೇ ದಿನೇ ಹೆಚ್ಚಾಗುತ್ತಿದ್ದರೂ ಜನರು ಬಂಗಾರ ಖರೀದಿಸುವುದನ್ನು ಮಾತ್ರ ನಿಲ್ಲಿಸಿಲ್ಲ. ಒಂದು ಗ್ರಾಂ ಚಿನ್ನದ ಬೆಲೆ ಕಳೆದ ವರ್ಷಕ್ಕಿಂತ ₹1,500 ಹೆಚ್ಚಳವಾಗಿದೆ. ಆದರೂ ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಸಂಖ್ಯೆಯ ಜನರು ಚಿನ್ನದ ಮಳಿಗೆಯತ್ತ ಆಗಮಿಸಿದ್ದರು. ಶುಕ್ರವಾರ ನಗರದಲ್ಲಿ ಒಂದು ಗ್ರಾಂ ಚಿನ್ನದ ದರ ₹6,700, ಒಂದು ಗ್ರಾಂ ಬೆಳ್ಳಿ ₹80 ಇತ್ತು.
‘ನಗರದಲ್ಲಿರುವ ನಾಲ್ಕು ಮಳಿಗೆಗಳಲ್ಲಿ ಬೆಳಗ್ಗೆಯಿಂದ ಜನ ತುಂಬಿಕೊಂಡಿದ್ದಾರೆ. ವ್ಯಾಪಾರ ವಹಿವಾಟು ಉತ್ತಮವಾಗಿ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ವ್ಯಾಪಾರವಾಗಿದೆ. ಆಭರಣಗಳ ಮೇಲೆ ರಿಯಾಯಿತಿ ನೀಡಿದ್ದು, ಜನರು ಆಸಕ್ತಿಯಿಂದ ಮಳಿಗೆಗೆ ಬಂದು ಖರೀದಿಸಿದರು’ ಎಂದು ಸುಶೀಲ್ ಜ್ಯುವೆಲರ್ಸ್ ಮಾಲೀಕ ಸುಶೀಲ್ ಪ್ರತಿಕ್ರಿಯೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.