ತುಮಕೂರು: ನಗರದ ತೋಟಗಾರಿಕಾ ಇಲಾಖೆ ಕಚೇರಿ ಆವರಣದಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಬಂದಿದ್ದ ಸಾರ್ವಜನಿಕರು ಬೇಸರದ ಮಾತುಗಳನ್ನಾಡಿದರು. ಶನಿವಾರ ಹಲವು ನಿರೀಕ್ಷೆ ಇಟ್ಟುಕೊಂಡು ಪ್ರದರ್ಶನಕ್ಕೆ ಬಂದವರು ನಿರಾಸೆಯಿಂದ ವಾಪಸಾಗುತ್ತಿದ್ದ ದೃಶ್ಯ ಕಂಡುಬಂತು.
ಹೂವುಗಳಿಂದ ತಯಾರಿಸಿದ ಮಾರ್ಕೋನಹಳ್ಳಿ ಜಲಾಶಯ, ತೆಂಗಿನ ಗರಿಯಿಂದ ಸಿದ್ಧಪಡಿಸಿದ ಅನುಭವ ಮಂಟಪವನ್ನು ಹೋಲುವ ಕಲಾಕೃತಿ, ಮರಳಿನಿಂದ ಸಿದ್ಧಪಡಿಸಿದ ರೈತನ ಆಕೃತಿ ಬಿಟ್ಟರೆ ಬೇರೆ ಏನೂ ವಿಶೇಷಗಳು ಇರಲಿಲ್ಲ. ತೋಟಗಾರಿಕಾ ಇಲಾಖೆ, ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ಇಲಾಖೆಯ ಮಳಿಗೆಗಳು ಜನರನ್ನು ಆಕರ್ಷಿಸಿದವು. ಉಳಿದ ಮಳಿಗೆಗಳಲ್ಲಿ ಬೆಳಗ್ಗೆ 11 ಗಂಟೆಯಾದರೂ ಮಾಹಿತಿ ನೀಡಲು ಯಾರೊಬ್ಬರೂ ಇರಲಿಲ್ಲ.
‘ಗೃಹಲಕ್ಷ್ಮಿ’ ಒಳಗೊಂಡಂತೆ ಸರ್ಕಾರದ ವಿವಿಧ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತೆರೆದಿದ್ದ ಮಳಿಗೆಯಲ್ಲಿ ಯೋಜನೆಗಳ ಬಗ್ಗೆ ತಿಳಿಸುವವರೇ ಇರಲಿಲ್ಲ. ಮಳಿಗೆ ಹತ್ತಿರ ಬಂದವರಿಗೆ ಖಾಲಿ ಕುರ್ಚಿಗಳ ದರ್ಶನವಾಯಿತು. ಪ್ರದರ್ಶನದಲ್ಲಿ ವಿವಿಧ ಇಲಾಖೆಗಳ 20 ಮಳಿಗೆ, 22 ಖಾಸಗಿ, 7 ಆಹಾರ ಮಳಿಗೆ ಸೇರಿ ಒಟ್ಟು 49 ಮಳಿಗೆಗಳನ್ನು ತೆರೆಯಲಾಗಿದೆ.
‘ಬಹುತೇಕ ಮಳಿಗೆಗಳು ಖಾಲಿಯಾಗಿವೆ. ವಿವಿಧ ಇಲಾಖೆಗಳ ಕುರಿತು ಮಾಹಿತಿ ನೀಡುವವರೇ ಇಲ್ಲ. ಸುಖಾ ಸುಮ್ಮನೆ ಸರ್ಕಾರದ ಹಣ ಪೋಲು ಮಾಡಲು ಪ್ರದರ್ಶನ ಏರ್ಪಡಿಸಿರುವಂತೆ ಇದೆ’ ಎಂದು ನಗರದ ನಿವಾಸಿ ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.
ತಿಂಡಿ ತಿನಿಸು ಮಾರಾಟ ಮಳಿಗೆ ಬಿಟ್ಟರೆ ಬೇರೆ ಮಳಿಗೆಗಳತ್ತ ಜನರು ಸುಳಿಯಲಿಲ್ಲ. ಪಶುಸಂಗೋಪನಾ ಇಲಾಖೆಯಿಂದ 2 ತಳಿಯ ಹಸು, 2 ತಳಿ ಟಗರುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಇದನ್ನು ಹೊರೆತು ಪಡಿಸಿದರೆ ಬೇರೆ ಯಾವುದೇ ಗಮನ ಸೆಳೆಯುವಂತಹ ವಿಷಯಗಳು ಪ್ರದರ್ಶನದಲ್ಲಿ ಕಾಣಿಸಲಿಲ್ಲ ಎಂದು ನಂದಿನಿ ಎಂಬುವರು ಬೇಸರಿಸಿದರು.
ಫಲಪುಷ್ಪ ಪ್ರದರ್ಶನಕ್ಕೆ ಬರುವ ಸಾರ್ವಜನಿಕರ ಸಂಖ್ಯೆಯೂ ಕಡಿಮೆ ಇತ್ತು. ವಿವಿಧ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಒಂದೇ ಸೂರಿನಡಿ ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ವಿವಿಧ ಮಳಿಗೆಗಳನ್ನು ತೆರೆದಿದ್ದರು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧ್ಯವಾಗಿಲ್ಲ.
‘ಜನರಿಗೆ ಫಲಪುಷ್ಪ ಪ್ರದರ್ಶನದ ಬಗ್ಗೆ ಮಾಹಿತಿ ಇಲ್ಲ. ತುಂಬಾ ಜನ ರೈತರು ಪಾಲ್ಗೊಂಡಿಲ್ಲ. ಮಾಹಿತಿ ಕೊರತೆಯಿಂದ ಹೆಚ್ಚಿನ ಜನ ಭಾಗವಹಿಸಲು ಆಗಿಲ್ಲ. ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಇನ್ನೂ ಹೆಚ್ಚಿನ ಪ್ರಚಾರ ಮಾಡಬೇಕಿತ್ತು’ ಎಂದು ಪ್ರದರ್ಶನದಲ್ಲಿ ಮಳಿಗೆ ತೆರೆದಿದ್ದ ಪ್ರಗತಿಪರ ರೈತರೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.