ADVERTISEMENT

ತುಮಕೂರು | ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ: ನಾಮಕಾವಸ್ಥೆ ಆಡಳಿತ

​ಪ್ರಜಾವಾಣಿ ವಾರ್ತೆ
Published 10 ಮೇ 2024, 4:39 IST
Last Updated 10 ಮೇ 2024, 4:39 IST
ಸಿ.ಯತಿರಾಜು
ಸಿ.ಯತಿರಾಜು   

ತುಮಕೂರು: ಜಿಲ್ಲಾಡಳಿತ ಬರ ಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಮಾಡಬೇಕು. ಅವ್ಯವಸ್ಥೆಯ ತಾಣವಾಗಿರುವ ಕೊಬ್ಬರಿ ಖರೀದಿ ಕೇಂದ್ರಗಳ ಸುಧಾರಣೆಗೆ ಕ್ರಮ ವಹಿಸಬೇಕು ಎಂದು ಸಂಯುಕ್ತ ಹೋರಾಟ ಕರ್ನಾಟಕ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿಯ ಆಡಳಿತ, ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಬ್ಬರಿ ಖರೀದಿ ಕೇಂದ್ರದಲ್ಲಿ ದುರ್ವ್ಯವಹಾರ ಹೆಚ್ಚಾಗಿದೆ. ಹಣ ಪಾವತಿ ವಿಳಂಬವಾಗುತ್ತಿದೆ. ಪಿಎಸ್‌ಎಸ್‌ ಮಾರ್ಗಸೂಚಿ ಪಾಲಿಸುತ್ತಿಲ್ಲ. ಮತ್ತೊಂದು ಕಡೆ ತೀವ್ರ ಬರದಿಂದ ತೆಂಗಿನ ಪೀಚು ಉದುರುತ್ತಿದೆ. ಕನಿಷ್ಠ ನೀರು ಪೂರೈಸಲು ಆಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಂದ್ರ- ರಾಜ್ಯ ಸರ್ಕಾರ ಪರಸ್ಪರ ದೂರಿಕೊಳ್ಳದೆ ಜನರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಸಂಯುಕ್ತ ಹೋರಾಟ ಕರ್ನಾಟಕ ಸಂಚಾಲಕ ಸಿ.ಯತಿರಾಜು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಬೆಂಕಿ ಬಿದ್ದಾಗ ಬಾಯಿ ತೋಡಲು ಹೋಗದೆ’ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಕೊಬ್ಬರಿ ಬೆಳೆಗಾರರು ಒಳಗೊಂಡಂತೆ ಎಲ್ಲ ರೈತರಿಗೆ ಪರಿಹಾರ ನೀಡಬೇಕು. ಈ ವಿಷಯದಲ್ಲಿ ರಾಜಕಾರಣ ಮಾಡಬಾರದು ಎಂದು ಒತ್ತಾಯಿಸಿದರು.

ADVERTISEMENT

ಚಿಂತಕ ಕೆ.ದೊರೈರಾಜ್‌, ‘ಮೈಕ್ರೊ ಫೈನಾನ್ಸ್‌ ಸೇರಿದಂತೆ ಇತರೆ ಸಾಲಗಳಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ತೀವ್ರ ಬರದಿಂದ ಎಲ್ಲ ವರ್ಗದ ಜನರು ಕಂಗಾಲಾಗಿದ್ದಾರೆ. ಇಂತಹ ಸಮಯದಲ್ಲಿ ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಳಕ್ಕೆ ಅವಕಾಶ ನೀಡಬಾರದು. ಖಾಸಗಿ ಶಾಲೆಗಳನ್ನು ನಿಯಂತ್ರಿಸಬೇಕು. ದುಡಿಯುವ ಕಾರ್ಮಿಕರಿಗೆ ಕೆಲಸ ನೀಡಬೇಕು’ ಎಂದು ಆಗ್ರಹಿಸಿದರು.

ರೈತ ಮುಖಂಡ ಜಯಚಂದ್ರ ಶರ್ಮ, ‘ಅಧಿಕಾರಿಗಳು ಕೊಬ್ಬರಿ ಬೆಳೆಗಾರರನ್ನು ತುಂಬಾ ಕೀಳಾಗಿ ನೋಡುತ್ತಿದ್ದಾರೆ. ಜಿಲ್ಲಾಧಿಕಾರಿ ನಾಮಕಾವಸ್ಥೆಗೆ ಆಡಳಿತ ನಡೆಸುತ್ತಿದ್ದಾರೆ. ಅವರು ಕಚೇರಿಯಿಂದ ಹೊರ ಬಂದು ರೈತರ ಕಷ್ಟ ಕೇಳುತ್ತಿಲ್ಲ. ಕೊಬ್ಬರಿ ಖರೀದಿ ಕೇಂದ್ರದಲ್ಲಿ ಹಗಲು ದರೋಡೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಮೇವು, ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುತ್ತಿದೆ. ಜಿಲ್ಲಾಧಿಕಾರಿಗಳು ಇದನ್ನು ಗಮನಿಸಬೇಕು’ ಎಂದು ಆಗ್ರಹಿಸಿದರು.

ರೈತ ಮುಖಂಡ ನಾಗೇಶ್, ‘ಕೊಬ್ಬರಿ ಖರೀದಿಸಿದ ಮೂರು ದಿನದ ಒಳಗೆ ಹಣ ಪಾವತಿಯಾಗಬೇಕು. ಏ. 13ರಿಂದ ಇದುವರೆಗೆ ಕೊಬ್ಬರಿ ಮಾರಿದ ಯಾರೊಬ್ಬರಿಗೂ ಹಣ ಬಂದಿಲ್ಲ. ರಾಜ್ಯ ಸರ್ಕಾರದ ಪ್ರೋತ್ಸಾಹ ಧನವೂ ಸಿಗುತ್ತಿಲ್ಲ. ಬಿಡುವು ಕೊಡದೆ ನಿರಂತರವಾಗಿ ಕೊಬ್ಬರಿ ಖರೀದಿಸಬೇಕು’ ಎಂದು ಹೇಳಿದರು.

ಮುಖಂಡರಾದ ಬಿ.ಉಮೇಶ್, ಸಿ.ಅಜ್ಜಪ್ಪ, ದೊಡ್ಡನಂಜಪ್ಪ, ಸೈಯದ್‌ ಮುಜೀಬ್‌, ಆರ್‌.ಎಸ್‌.ಚನ್ನಬಸವಣ್ಣ, ಸಿದ್ದಪ್ಪ, ಕಂಬೇಗೌಡ, ತಿಮ್ಮೇಗೌಡ, ಶಿವನಂಜಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.