ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ನಾಡಕಚೇರಿಯಲ್ಲಿ ನಾಲ್ಕೈದು ತಿಂಗಳಿನಿಂದ ಆಧಾರ್ ಕಾರ್ಡ್ ನೋಂದಣಿ ಮಾಡಿಸಲು ಕಂಪ್ಯೂಟರ್ ಆಪರೇಟರ್‌ಗಳ ಕೊರತೆಯಿಂದಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ.
ತಾಲ್ಲೂಕಿನಲ್ಲಿ ದೊಡ್ಡ ಹೋಬಳಿಯಾಗಿದ್ದು ಸುಮಾರು 110 ಗ್ರಾಮಗಳು ಈ ಹೋಬಳಿಯ ನಾಡಕಚೇರಿಯ ವ್ಯಾಪ್ತಿಗೆ ಬರುತ್ತವೆ.
ಆಧಾರ್ ಕಾರ್ಡ್ ನೋಂದಣಿ ಮಾಡಿಸುತ್ತಿದ್ದ ಸಿಬ್ಬಂದಿ ಹೆರಿಗೆ ರಜೆ ಮೇಲೆ ತೆರಳಿದ್ದು ನಾಲ್ಕೈದು ತಿಂಗಳು ಕಳೆದರೂ ಈವರೆಗೆ ಈ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡದಿರುವುದು ಸಂಕಷ್ಟಕ್ಕೆ ಕಾರಣವಾಗಿದೆ.
ಆಧಾರ್ ಕಾರ್ಡ್ ನೋಂದಣಿ ಮಾಡಿಸಲು ಜನರು ಪರಡಾಡುತ್ತಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಹಾಗೂ ಉಪತಹಶೀಲ್ದಾರ್ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಆಧಾರ್ ಕಾರ್ಡ್ ನೋಂದಣಿ ಮಾಡಿಸಲು ಅಥವಾ ತಿದ್ದುಪಡಿ ಮಾಡಿಸಲು ಜನರು ಶಿರಾ ತಾಲ್ಲೂಕು ಕೇಂದ್ರಕ್ಕೆ ಬರಬೇಕಿದೆ.
ಬುಕ್ಕಾಪಟ್ಟಣ ಒಂದು ರೀತಿಯಲ್ಲಿ ಶಾಪಗ್ರಸ್ತ ಹೋಬಳಿಯಾಗಿದೆ. ಬುಕ್ಕಾಪಟ್ಟಣ ಹೋಬಳಿ ಶಿರಾ ತಾಲ್ಲೂಕಿಗೆ ಸೇರಿದ್ದರೂ ಸಹ ಚಿಕ್ಕನಾಯಕನಹಳ್ಳಿ ವಿಧಾನ ಸಭಾ ವ್ಯಾಪ್ತಿಗೆ ಸೇರುವುದರಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ತಾರತಮ್ಯ ಧೋರಣೆಗೆ ಒಳಗಾಗಿದೆ. ಇಲ್ಲಿನ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುವುದು ಜನರ ಅಳಲು. ಅಧಿಕಾರಿಗಳು ಎಚ್ಚೆತ್ತು ಆಧಾರ್ ಕಾರ್ಡ್ ನೋಂದಣಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.