ADVERTISEMENT

ಗಣಿಗಾರಿಕೆಗೆ ಅನುಮತಿ: ಹೆಚ್ಚಿದ ಆತಂಕ

ತಿಮ್ಮರಾಯನಹಳ್ಳಿ ಗ್ರಾಮಸ್ಥರ ಅಸಮಾಧಾನ: ಪ್ರತಿಭಟನೆಯ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 19:45 IST
Last Updated 19 ಮಾರ್ಚ್ 2021, 19:45 IST
ತಿಪಟೂರು ತಾಲ್ಲೂಕಿನ ತಿಮ್ಮರಾಯನಹಳ್ಳಿಯ ರಾಕ್ಷಸಿ ಗುಡ್ಡದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ
ತಿಪಟೂರು ತಾಲ್ಲೂಕಿನ ತಿಮ್ಮರಾಯನಹಳ್ಳಿಯ ರಾಕ್ಷಸಿ ಗುಡ್ಡದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ   

ತಿಪಟೂರು: ರಾಷ್ಟ್ರೀಯ ಹೆದ್ದಾರಿ ಯೋಜನೆ ಕಾಮಗಾರಿಗಾಗಿ ಗೋಮಾಳ ಜಾಗದಲ್ಲಿ ಕಲ್ಲುಗಣಿಗಾರಿಕೆಗೆ ಸರ್ಕಾರ ಮಂಜೂರಾತಿ ನೀಡಿದ್ದು, ಸ್ಥಳೀಯರು ಗುಳೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ತಿಮ್ಮರಾಯನಹಳ್ಳಿಯ ಸರ್ವೇ ನಂಬರ್‌ 15ರಲ್ಲಿ 4 ಎಕರೆ ಜಾಗವನ್ನು ಭಾರತಮಾಲಾ ಪರಿಯೋಜನಾ ಸಂಬಂಧ ಎನ್.ಎಚ್.206 ಕಾಮಗಾರಿಗಾಗಿ ರಾಕ್ಷಸಿ ಗುಡ್ಡದಲ್ಲಿ ಕಲ್ಲುಗಣಿಗಾರಿಕೆಗೆ ಮೂರು ವರ್ಷ ಮಂಜೂರಾತಿ ನೀಡಲಾಗಿದೆ.

ತಿಮ್ಮರಾಯನಹಳ್ಳಿ ಕುಗ್ರಾಮವಾಗಿದ್ದು, ಇಲ್ಲಿನ 275 ಎಕರೆ ಸರ್ಕಾರಿ ಪ್ರದೇಶದಲ್ಲಿ ನೂರಕ್ಕೂ ಹೆಚ್ಚು ಎಕರೆಯನ್ನು ಅರಣ್ಯ ಪ್ರದೇಶಕ್ಕೆ ನೀಡಿದ್ದು ಉಳಿದ ಜಮೀನು ಗೋಮಾಳವಾಗಿದೆ. ಗ್ರಾಮಸ್ಥರು ಹೈನುಗಾರಿಕೆ, ಕುರಿ, ಮೇಕೆ ನಂಬಿ ಜೀವನ ನಿರ್ವಸುತ್ತಿದ್ದಾರೆ. ಇಲ್ಲಿನ ರಾಕ್ಷಸಿ ಗುಡ್ಡಕ್ಕೆ ಕಳೆದ ಫೆಬ್ರುವರಿಯಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿದೆ. ಕಾಮಗಾರಿಯೂ ಪ್ರಾರಂಭಿಸಿದ್ದಾರೆ. ಗುಡ್ಡದಲ್ಲಿ 2 ಸಾವಿರ ಅಡಿಯಷ್ಟು ಅಳದವರಗೆ ಬಂಡೆಯಿದೆ ಎಂದು ಭೂವಿಜ್ಞಾನಿಗಳು ತಿಳಿಸಿದ್ದಾರೆ.

ADVERTISEMENT

ಸ್ಥಳೀಯ ಮಣಕಿಕೆರೆ ಗ್ರಾಮ ಪಂಚಾಯತಿಯಲ್ಲಿ ಅನುಮೋದನೆ ದೊರೆತಿಲ್ಲ. ಜೊತೆಗೆ ಸ್ಥಳೀಯರ ಗಮನಕ್ಕೆ ತರದೇ ಕಲ್ಲುಗಣಿಗಾರಿಕೆ ಪ್ರಾರಂಭಿಸಿದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪ.

ಗ್ರಾಮವು ತಿಂಗಳಲ್ಲಿಯೇ ದೂಳು ಮಯವಾಗಿದೆ. ವಾರಕ್ಕೆ 3-4 ಬಾರಿ ಬಂಡೆ ಬ್ಲಾಸ್ಟ್ ಮಾಡುತ್ತಿದ್ದು, ಸ್ಥಳೀಯರ ಮನೆಗಳು ನಡುಗಿದ ಅನುಭವವಾಗುತ್ತಿದೆ. ಈಗಾಗಲೇ ನೀರಿನ ತತ್ವಾರವಿದ್ದು, ಅಂತರ್ಜಲ ಮತ್ತಷ್ಟು ಕುಸಿಯುವ ಆಂತಕ ಎದುರಾಗಿದೆ.

‘ಸ್ಥಳೀಯರು ನಿತ್ಯ ಜಾನುವಾರು ಮೇಯಿಸಲು ಗೋಮಾಳಕ್ಕೆ ಹೋಗುತ್ತಾರೆ. ಸಂಜೆ 4ಕ್ಕೆ ಸ್ಫೋಟಕ್ಕೆ ಸಿದ್ಧತೆ ನಡೆಸುತ್ತಿದ್ದೇವೆ. ಸ್ಥಳೀಯರು ಇಲ್ಲಿ ಇರುವಂತಿಲ್ಲ ಎಂದು ಹೇಳಿ ಕಳುಹಿಸುತ್ತಾರೆ. ಪರಿಸರಕ್ಕೂ ದಕ್ಕೆಯಾಗುತ್ತದೆ. ಮೇವು ಕಲುಷಿತವಾಗುತ್ತಿದೆ’ ಎನ್ನುತ್ತಾರೆ ಸ್ಥಳೀಯರು.

‌ಸರ್ಕಾರ 4 ಎಕರೆ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮೋದರೆ ನೀಡಿದ್ದಾರೆ ಎನ್ನುವ ಗುತ್ತಿಗೆದಾರರೂ, ಅದಕ್ಕಿಂತ ಹೆಚ್ಚಿನ ಸ್ಥಳವನ್ನು ಅಕ್ರಮಿಸಿಕೊಂಡಿದ್ದಾರೆ. 3 ವರ್ಷಗಳಲ್ಲಿ ಇಡೀ ಗುಡ್ಡವನ್ನು ಖಾಲಿ ಮಾಡುತ್ತಾರೆ ಎನ್ನುವುದು ಸ್ಥಳೀಯರ ಆರೋಪ.

ಗ್ರಾಮದಲ್ಲಿ ಪುರಾತನ ಆಂಜನೇಯ ಸ್ವಾಮಿ ದೇಗುಲ, ಅದರ ಪಕ್ಕದಲ್ಲಿಯೇ ಶಾಸನದ ಕಲ್ಲಿದೆ. ಕಲ್ಲುಗಣಿಗಾರಿಕೆಗೆ ಮಂಜೂರಾತಿ ನೀಡಿದಾಗಿನಿಂದ ಗ್ರಾಮದ ಒಳ ಭಾಗದಿಂದಲೇ ಭಾರಿ ವಾಹನಗಳು ತೆರಳುತ್ತಿವೆ. ಇದರಿಂದಾಗಿ ಸ್ಥಳೀಯ ದೇವಾಲಯ ಹಾಗೂ ಶಾಸನದ ಪಕ್ಕದಲ್ಲಿ ರಸ್ತೆಯನ್ನು ಮಾಡಿಕೊಂಡು ತೆರಳುವ ವಾಹನಗಳು ಗುದ್ದಿಕೊಂಡೆ ಹೋಗುತ್ತಿರುವುದಕ್ಕೆ ಗ್ರಾಮಸ್ಥರು ಅಸಮಾಧಾನಗೊಂಡಿದ್ದಾರೆ.

ಒಂದೇ ತಿಂಗಳಿನಲ್ಲಿ ಗ್ರಾಮದಲ್ಲಿ ಜನರು ವಾಸ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತಿದ್ದು, ಇನ್ನೂ 3 ವರ್ಷ ಗಣಿಗಾರಿಕೆ ಮುಂದುವರೆದರೆ ಗ್ರಾಮವೇ ಇಲ್ಲದಂತಾಗುತ್ತದೆ ಎಂಬ ಭಯ ಸ್ಥಳೀಯರನ್ನು ಕಾಡುತ್ತಿದೆ. ಕಲ್ಲುಗಣಿಗಾರಿಕೆ ನಿಲ್ಲಿಸದಿದ್ದರೆ ಹೋರಾಟ ಅನಿವಾರ್ಯ ಎಂದು ಸ್ಥಳೀಯರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.