ಕೊಡಿಗೇನಹಳ್ಳಿ: ಪಟ್ಟಣದಲ್ಲಿ ರಸ್ತೆ ಒತ್ತುವರಿ ಹಾಗೂ ಅನಧಿಕೃತ ಅಂಗಡಿಗಳಿಂದ ಜನರ ಓಡಾಟ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ವಾಹನಗಳನ್ನು ಯದ್ವಾತದ್ವ ಓಡಿಸುವುದಲ್ಲದೇ, ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಜನರಿಗೆ ಕಿರಿಕಿರಿಯಾಗುತ್ತಿದೆ.
ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ವಿಸ್ತೀರ್ಣವೂ ಹೆಚ್ಚುತ್ತಿದೆ. ಮಧುಗಿರಿ ಜಿಲ್ಲಾ ಕೇಂದ್ರವಾದರೆ ಕೊಡಿಗೇನಹಳ್ಳಿ ತಾಲ್ಲೂಕು ಕೇಂದ್ರವಾಗಲಿದೆ ಎಂಬ ಭರವಸೆಯಲ್ಲಿದ್ದಾರೆ ಇಲ್ಲಿನ ಜನರು.
ಹಿಂದೆ 120 ಅಡಿ ಇದ್ದ ಪಟ್ಟಣದಲ್ಲಿನ ಮುಖ್ಯ ರಸ್ತೆ ಒತ್ತುವರಿಯಿಂದಾಗಿ ಸದ್ಯ 30ರಿಂದ 40 ಅಡಿಗೆ ಕುಸಿದಿದೆ. ಅನಧಿಕೃತ ಅಂಗಡಿಗಳ ನಿರ್ಮಾಣ ಹಾಗೂ ಒತ್ತುವರಿಯೇ ಇದಕ್ಕೆ ಮುಖ್ಯ ಕಾರಣ. ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಪಟ್ಟಣದಲ್ಲಿ ಬಸ್ ನಿಲ್ದಾಣ, ದಿನಸಿ ಅಂಗಡಿ, ಮಾಂಸ ಮಾರಾಟ ಮಳಿಗೆ ಮುಂದೆ ಸವಾರರು ತಮ್ಮ ವಾಹನಗಳನ್ನು ಎಲ್ಲೆಂದರಲ್ಲೇ ನಿಲ್ಲಿಸುವುದರ ಜೊತೆಗೆ ನಾಯಿಗಳ ಉಪಟಳದಿಂದ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ. ಸಂಚಾರ ನಿಯಮಗಳು ಪಾಲನೆಯಾಗುತ್ತಿಲ್ಲ. ಅಪ್ರಾಪ್ತ ವಯಸ್ಕರು ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ 3-4 ಜನರನ್ನು ಕೂರಿಸಿಕೊಂಡ ಅತ್ಯಂತ ವೇಗವಾಗಿ ಚಾಲನೆ ಮಾಡುವುದು ಸಾಮಾನ್ಯವಾಗಿದೆ.
ಪಟ್ಟಣ ಹಾಗೂ ರಸ್ತೆಗಳಲ್ಲಿ ಆರ್‌ಟಿಒ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಆಗಾಗ ದಾಳಿ ನಡೆಸಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸುವುದರ ಜೊತೆಗೆ ಕ್ರಮ ಜರುಗಿಸಬೇಕು. ಗ್ರಾಮ ಪಂಚಾಯಿತಿ ಮತ್ತು ಲೋಕೋಪಯೋಗಿ ಇಲಾಖೆಯವರು ಪಟ್ಟಣದ ರಸ್ತೆಬದಿ ನಿರ್ಮಿಸಿರುವ ಅನಧಿಕೃತ ಅಂಗಡಿ ಹಾಗೂ ರಾಜಕಾಲುವೆಗಳನ್ನು ತೆರವುಗೊಳಿಸಿದರೆ ಪಟ್ಟಣದ ಅಭಿವೃದ್ಧಿಗೆ ಸಹಕಾರಿ ಎನ್ನುತ್ತಾರೆ ಪಟ್ಟಣದ ನಿವಾಸಿಗಳು.
ಟ್ಟಣದಲ್ಲಿ ಸಂಚಾರ ನಿಯಮ ಪಾಲನೆ ಸುಗಮ ಸಂಚಾರಕ್ಕೆ ಪ್ರತಿದಿನ ಬೆಳಿಗ್ಗೆ- ಸಂಜೆ ಹಬ್ಬಗಳು ಸಂತೆ ದಿನವಾದ ಪ್ರತಿ ಗುರುವಾರ ಬಸ್ ನಿಲ್ದಾಣ ಹಾಗೂ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಗಸ್ತು ವ್ಯವಸ್ಥೆ ಮಾಡಬೇಕುಪಕೆ.ಎನ್.ಮನೋಹರ ಕೊಡಿಗೇನಹಳ್ಳಿ
ಪಟ್ಟಣದ ಬೆಳವಣಿಗೆಯ ವೇಗಕ್ಕೆ ತಕ್ಕಂತೆ ಮಿನಿ ವಿಧಾನಸೌಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎಸ್‌ಬಿಐ ಶಾಖೆ ಡಬಲ್ ರೋಡ್ ಬಸ್ ನಿಲ್ದಾಣ ತಂಗುದಾಣ ಉನ್ನತೀಕರಿಸಿದ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಒತ್ತು ನೀಡಬೇಕುಜಯರಾಮ್ ಶಿಕ್ಷಕ
ಆಂಧ್ರದಿಂದ ಈ ಭಾಗಕ್ಕೆ ಬರುವ ಹಲವು ಮದ್ಯವ್ಯಸನಿಗಳು ವೇಗವಾಗಿ ವಾಹನ ಚಾಲನೆ ಮಾಡುವುದರಿಂದ ಅಪಘಾತ ಸಂಭವಿಸಿ ಅಮಾಯಕರು ಬಲಿಯಾಗುತ್ತಿದ್ದಾರೆ. ಆರ್‌ಟಿಒ ಅಧಿಕಾರಿಗಳು ನಿಗಾವಹಿಸಬೇಕು. ಅಲ್ಲಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕುಗುಟ್ಟೆ ಸಂಜೀವಮೂರ್ತಿ ವಕೀಲ
ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅಂತಹ ರಸ್ತೆಯಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಸಂಚರಿಸಲು ಹೆದರುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ನಿಯಂತ್ರಿಸಬೇಕು.ರಾಜಗೋಪಾಲರೆಡ್ಡಿ ಕೊಡಿಗೇನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.