ಪಾವಗಡ: ಪಟ್ಟಣದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಪುರಸಭೆ ಅಧ್ಯಕ್ಷರಾಗಿ ಪಿ.ಎಚ್.ರಾಜೇಶ್, ಉಪಾಧ್ಯಕ್ಷೆಯಾಗಿ ಗೀತಾ ಹನುಮಂತರಾಯಪ್ಪ ಆಯ್ಕೆಯಾದರು.
15 ತಿಂಗಳಿನಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ತೆರವಾಗಿತ್ತು. ಉಪವಿಭಾಗಾಧಿಕಾರಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ, ಉಪಾಧ್ಯಕ್ಷೆ ಸ್ಥಾನಕ್ಕೆ ಒಬ್ಬೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದರು.
ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಚುನಾವಣೆ ಫಲಿತಾಂಶ ಪ್ರಕಟಿಸಿದರು.
ಶಾಸಕ ಎಚ್.ವಿ. ವೆಂಕಟೇಶ್ ಮಾತನಾಡಿ, ಪಕ್ಷದಿಂದ ಆಯ್ಕೆಯಾದ ಪ್ರತಿಯೊಬ್ಬರೂ ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದಾರೆ. ಈಗಾಗಲೇ ಬೈಪಾಸ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಬೈಪಾಸ್ ನಿರ್ಮಾಣವಾದ ನಂತರ ಪಟ್ಟಣದ ವಾಹನ ದಟ್ಟಣೆ ಕಡಿಮೆಯಾಗಲಿದೆ ಎಂದರು.
ಪುರಸಭೆ ಅಧ್ಯಕ್ಷ ಪಿ.ಎಚ್. ರಾಜೇಶ್ ಮಾತನಾಡಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣ, ಬಡ ಜನರಿಗೆ ವಸತಿ ಸೌಕರ್ಯ, ಸ್ವಚ್ಛತೆಗೆ ಆದ್ಯತೆ ನೀಡಿ ಪಟ್ಟಣದ ಸಂಪೂರ್ಣ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಸದಸ್ಯರಾದ ತೆಂಗಿನಕಾಯಿ ರವಿ, ಮಹಮದ್ ಇಮ್ರಾನ್, ರವಿಕುಮಾರ್, ವಿಜಯಕುಮಾರ್, ವೇಲುರಾಜು, ವೆಂಕಟರಮಣ, ಗೊರ್ತಿ ನಾಗರಾಜು, ಗಂಗಮ್ಮ, ರಾಮಾಂಜಿನಪ್ಪ, ಧನಲಕ್ಷ್ಮಿ, ಲಕ್ಷ್ಮಿದೇವಿ, ಅನ್ನಪೂರ್ಣಮ್ಮ, ಮಾಲಿನ್ ತಾಜ್, ಸುಬ್ರಹ್ಮಣ್ಯಂ, ನಾಗಬೂಷಣರೆಡ್ಡಿ, ಮುಖ್ಯಾಧಿಕಾರಿ ಜಾಫರ್ ಷರೀಫ್, ಆರೋಗ್ಯ ನಿರೀಕ್ಷಕ ಷಂಷುದ್ದಹಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.