ADVERTISEMENT

ಹುಳಿಯಾರು | ಪೊಲೀಸರಿಗಿಲ್ಲ ವ್ಯವಸ್ಥಿತ ವಸತಿಗೃಹ: ಸುತ್ತ ಗಿಡ–ಗಂಟಿ, ಸೋರುವ ಚಾವಣಿ

ಆರ್.ಸಿ.ಮಹೇಶ್
Published 4 ನವೆಂಬರ್ 2024, 6:02 IST
Last Updated 4 ನವೆಂಬರ್ 2024, 6:02 IST
ಹುಳಿಯಾರು ಪೊಲೀಸ್‌ ವಸತಿ ಗೃಹಗಳ ಮಧ್ಯೆ ಬಳ್ಳಾರಿ ಜಾಲಿ ಬೆಳೆದಿದೆ
ಹುಳಿಯಾರು ಪೊಲೀಸ್‌ ವಸತಿ ಗೃಹಗಳ ಮಧ್ಯೆ ಬಳ್ಳಾರಿ ಜಾಲಿ ಬೆಳೆದಿದೆ   

ಹುಳಿಯಾರು: ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ವಸತಿ ಗೃಹಗಳು ಶಿಥಿಲವಾಗಿದ್ದು, ಜೀವ ಭಯದಲ್ಲಿ ಬದುಕುವಂತಾಗಿದೆ.

ಹುಳಿಯಾರು ಪೊಲೀಸ್‌ ಠಾಣೆ ಎರಡು ಪಿಎಸ್‌ಐ ಹುದ್ದೆ ಹಾಗೂ 40 ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ಠಾಣೆ. ಸದ್ಯಕ್ಕೆ ಐದು ಕಾನ್‌ಸ್ಟೆಬಲ್‌ ಹುದ್ದೆ ಖಾಲಿಯಿದ್ದು, 35 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ವಸತಿಗಾಗಿ ನಾಡಕಚೇರಿ ಹಿಂಭಾಗ ವಸತಿ ಗೃಹ ನಿರ್ಮಿಸಲಾಗಿದೆ.

40 ವರ್ಷಗಳ ಹಿಂದೆ ನಿರ್ಮಿಸಿರುವ ಆರು ಜೋಡಿ ಅಂದರೆ 12 ವಸತಿ ಗೃಹಗಳು ಶಿಥಿಲವಾಗಿವೆ. ಅವುಗಳಲ್ಲಿ 4 ಜೋಡಿ ಗೃಹಗಳು ಸಂಪೂರ್ಣ ಹಾಳಾಗಿ ಕಟ್ಟಡ ನೆಲಸಮಕ್ಕೆ ಆದೇಶವಾಗಿದೆ. ಉಳಿದ 6 ಗೃಹಗಳಲ್ಲಿ ಪೊಲೀಸರು ವಾಸವಿದ್ದು ಸಂಪೂರ್ಣ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಗೃಹಗಳ ಗೋಡೆ ಬಿರುಕು ಬಿಟ್ಟು ಬೆಳಕು ಹಾಯುತ್ತಿದೆ. ಪ್ರತಿ ವರ್ಷ ಮಳೆ ಬಂದಾಗಲು ನೀರು ಸೋರಿ ಕಟ್ಟಡದ ಅಂದ ಕೆಟ್ಟು ಹೋಗಿದೆ.

ADVERTISEMENT

ವಸತಿ ಗೃಹಗಳ ಹಿಂದೆ ಮುಂದೆ ಗಿಡ ಗಂಟಿ ಬೆಳೆದು ಸಂಪೂರ್ಣ ಕಾಡಿನಂತಾಗಿದೆ. ಕೆಲ ಕಡೆ ಬಳ್ಳಾರಿ ಜಾಲಿ ಮರದಂತೆ ಬೆಳೆದು ನಿಂತರೆ, ಗೃಹಗಳ ಮುಂದೆ ಬಹು ವರ್ಷಗಳ ಹಿಂದೆ ಹಾಕಿದ್ದ ನೀಲಗಿರಿ ಮರಗಳು ಕಟ್ಟಡಗಳನ್ನು ಅಪೋಶನ ಪಡೆದಿವೆ. ಮನೆಗಳ ಮುಂದೆ ಹಂದಿ-ನಾಯಿಗಳ ಆವಾಸ ಸ್ಥಾನವಾಗಿದೆ. ಅವುಗಳು ಆಟವಾಡಿಕೊಂಡು ಹೋದ ಮೇಲೆ ಪೊಲೀಸರ ಮಕ್ಕಳು ಆಟವಾಡುತ್ತಾರೆ. ವಸತಿ ಗೃಹಗಳಿಗೆ ಹೋಗುವ ದಾರಿಯಲ್ಲೂ ಗಿಡಗಳು ಬೆಳೆದು ಓಡಾಡುವುದೆ ದುಸ್ತರವಾಗಿದೆ.

10 ವರ್ಷದಲ್ಲಿಯೇ ಹಾಳಾದ ಕಟ್ಟಡ: ದಶಕದ ಹಿಂದೆ 6 ಮನೆಗಳನ್ನು ಒಳಗೊಂಡ ಎರಡು ಮಹಡಿಯ ಕಟ್ಟಡ ನಿರ್ಮಿಸಲಾಗಿತ್ತು. ಆದರೆ ಆ ಕಟ್ಟಡವೂ ನಿರ್ವಹಣೆಯಿಲ್ಲದೆ ಸೊರಗಿ 10 ವರ್ಷಗಳಿಯೇ ವಾಸಕ್ಕೆ ಯೋಗ್ಯವಿಲ್ಲದಂತಾಯಿತು. ಕಟ್ಟಡ ಸಂಪೂರ್ಣ ಸೋರುತ್ತಿದ್ದು, ಮಳೆ ಬಂದರೆ ನೀರು ತೊಟ್ಟಿಕ್ಕದ ಸ್ಥಳ ಹುಡುಕಲು ಸಾಹಸ ಪಡುವಂತಾಗಿದೆ. ಕಟ್ಟಡದ ಸುತ್ತಮುತ್ತ ಗಿಡಗಳು ಬೆಳೆದು ಹಂದಿಗಳು ವಾಸ ಮಾಡುತ್ತಾ ತಳಪಾಯಕ್ಕೆ ಸಂಚಕಾರ ತರುತ್ತಿವೆ. ಮಳೆ ಬಂದಾಗ ಕಟ್ಟಡ ಸೋರುವುದರಿಂದ ಮನೆಗಳಲ್ಲಿ ದುರ್ವಾಸನೆ ಬೀರುತ್ತಿದೆ. ಮನೆಯ ಸ್ನಾನಗೃಹ ಹಾಗೂ ಶೌಚಾಲಯದ ಬಾಗಿಲು ಮುರಿದು ಹೋಗಿದ್ದು ಮನೆಯೊಳಗೆ ಮೂಗು ಮುಚ್ಚಿಕೊಂಡು ಬದುಕುವಂತಾಗಿದೆ. ಚಾವಣಿ ಕಾಂಕ್ರಿಟ್‌ ಪುಡಿಪುಡಿಯಾಗಿ ಉದುರುತ್ತಿದೆ. ಇತ್ತೀಚೆಗೆ ಬಿದ್ದ ಮಳೆಗೆ ಕಟ್ಟಡ ಸಂಪೂರ್ಣ ಶಿಥಿಲವಾಗಿದ್ದು ಮಕ್ಕಳ ಜತೆ ಹೇಗೆ ಜೀವನ ನಡೆಸುವುದು ಎಂದು ಪೊಲೀಸರ ಪತ್ನಿಯೊಬ್ಬರು ನೋವು ತೋಡಿಕೊಂಡರು.

ಪಿಎಸ್‌ಐ ಕಟ್ಟಡ ಶಿಥಿಲ: ಪಿಎಸ್‌ಐ ವಾಸಕ್ಕೆ ವಸತಿ ಗೃಹ ನಿರ್ಮಿಸಿದ್ದು, ಅದೂ ಶಿಥಿಲಗೊಂಡಿದೆ. ಕಟ್ಟಡದ ಕಾಂಪೌಂಡ್‌ ಹಾಗೂ ಸುತ್ತಮುತ್ತ ಗಿಡಗಳು ಬೆಳೆದು ಇಲ್ಲಿಗೆ ವರ್ಗವಾಗಿ ಬರುವ ಪಿಎಸ್‌ಐಗಳು ಯಾರೂ ವಾಸ ಮಾಡುತ್ತಿಲ್ಲ. ಹೊಸದಾಗಿ ಬಂದ ಪಿಎಸ್‌ಐಗಳು ಇಲ್ಲಿನ ವಾಸದ ಮನೆ ನೋಡಿ ಭಯಭೀತರಾಗಿ ಬೇರೆ ಮನೆಯನ್ನು ಬಾಡಿಗೆ ಪಡೆಯುತ್ತಿದ್ದಾರೆ.

ಜನರಿಗೆ ರಕ್ಷಣೆ ನೀಡುವ ಪೊಲೀಸರಿಗೆ ನಿರ್ಭಯವಾಗಿ ವಾಸಿಸಲು ವಸತಿಗೃಹ ನಿರ್ಮಿಸಬೇಕು. ಹಲವು ವರ್ಷ ಕಳೆದರೂ ಸರ್ಕಾರ ಗೃಹಗಳನ್ನು ನಿರ್ಮಿಸದ ಕಾರಣ ಇಲ್ಲಿಗೆ ವರ್ಗವಾಗಿ ಬರುವ ಪೊಲೀಸರು ಬಾಡಿಗೆ ಮನೆಗೆ ಹುಡುಕಾಡುತ್ತಾರೆ.
-ಮೆಡಿಕಲ್‌ ಚನ್ನಬಸವಯ್ಯ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ
ಸದಾ ಒತ್ತಡದಲ್ಲಿ ಕರ್ತವ್ಯನಿರ್ವಹಿಸುವ ಪೊಲೀಸರಿಗೆ ಸೂರಿನ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಇತ್ತೀಚೆಗೆ ಒತ್ತಡದಲ್ಲಿ ಕೆಲಸ ನಿರ್ವಹಿಸಲು ಆಗದೆ ಹೃದಯ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಅವರನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸುವುದು ಸರಿಯಲ್ಲ.
-ಕೆಂಕೆರೆ ಸತೀಶ್‌, ರಾಜ್ಯ ರೈತಸಂಘದ ಸಂಚಾಲಕ
ಪತ್ರಿಕೆ ಹಾಕಲು ದಿನವೂ ಪೊಲೀಸರ ವಸತಿ ಗೃಹಗಳಿಗೆ ತೆರಳುತ್ತೇನೆ. ಅಲ್ಲಿಗೆ ಹೋಗುವ ದಾರಿಯೇ ಉತ್ತಮವಾಗಿಲ್ಲ. ಮನೆಗಳ ಮುಂದೆ ಗಿಡಗಳು ಬೆಳೆದು ಅಲ್ಲಿಗೆ ಹೋಗುವುದು ದುಸ್ತರವಾಗಿದೆ.
-ಡಿ.ಯೋಗೀಶ್‌ ಪತ್ರಿಕಾ ಪ್ರತಿನಿಧಿ ಹುಳಿಯಾರು
ತಳಮಟ್ಟದಲ್ಲಿ ಕೆಲಸ ನಿರ್ವಹಿಸುವ ಪೊಲೀಸರಿಗೆ ಮೂಲ ಸೌಕರ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಹುಳಿಯಾರಿನ ಪೊಲೀಸ್‌ ವಸತಿ ಗೃಹಗಳನ್ನು ನೋಡಿದರೆ ಸರ್ಕಾರದ ನೀತಿಗಳು ಕಡತದಲ್ಲಿ ಮಾತ್ರ ಎಂಬುದು ಅರ್ಥವಾಗುತ್ತದೆ.
-ಎಚ್.ಎನ್.ರಾಘವೇಂದ್ರ ಅಧ್ಯಕ್ಷ ಜಯಕರ್ನಾಟಕ ಜನಪರ ವೇದಿಕೆಯ ಹುಳಿಯಾರು ಘಟಕ
ಈಗಾಗಲೇ ಎರಡು ಕಟ್ಟಡಗಳ ನೆಲಸಮಕ್ಕೆ ಆದೇಶ ನೀಡಲಾಗಿದೆ. ಉಳಿದ ಕಟ್ಟಡದ ದುರಸ್ತಿ ಸೇರಿದಂತೆ ಹೊಸದಾಗಿ ವಸತಿ ಗೃಹ ನಿರ್ಮಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಗಿದೆ.
-ವಿನಾಯಕ ಶೆಟ್ಟಿಗೇರಿ ಡಿವೈಎಸ್‌ಪಿ
ಹುಳಿಯಾರಿನ ಪೊಲೀಸ್‌ ವಸತಿ ಗೃಹಗಳ ಹಿಂಭಾಗದ ನೋಟ
ಪೊಲೀಸ್‌ ವಸತಿ ಗೃಹದ ಮುಂಭಾಗ ಹಿಂದಿಗಳು ಓಡಾಡಿ ರಾಡಿ ಮಾಡಿದ ಸ್ಥಳದಲ್ಲಿ ಮಕ್ಕಳು ಆಟವಾಡುತ್ತಿರುವುದು
10 ವರ್ಷದ ಹಿಂದಷ್ಟೇ ನಿರ್ಮಿಸಿರುವ ಕಟ್ಟಡದ ದುಸ್ಥಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.