ADVERTISEMENT

ಕುಮಾರಸ್ವಾಮಿ ಹೆಸರು ಮತ್ತೆ ಮುನ್ನೆಲೆಗೆ: ಜೆಡಿಎಸ್‌ಗೆ ಕ್ಷೇತ್ರ ಒಲಿಯುವುದೆ?

ಬಿಜೆಪಿಯಲ್ಲಿ ಹೆಚ್ಚಿದ ಬಣ ರಾಜಕಾರಣ; ಜೆಡಿಎಸ್‌ಗೆ ಕ್ಷೇತ್ರ ಒಲಿಯುವುದೆ?

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 4:47 IST
Last Updated 21 ಫೆಬ್ರುವರಿ 2024, 4:47 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ತುಮಕೂರು: ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ– ಜೆಡಿಎಸ್ ಪಾಳಯದಿಂದ ದಿನಕ್ಕೊಂದು ಹೆಸರು ಚಾಲ್ತಿಗೆ ಬರುತ್ತಿದ್ದು, ಈಗ ಎಚ್.ಡಿ.ಕುಮಾರಸ್ವಾಮಿ ಹೆಸರು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಹಿಂದೊಮ್ಮೆ ಕುಮಾರಸ್ವಾಮಿ ಕಣಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ನಂತರ ಹಿಂದೆ ಸರಿದಂತಹ ವಾತಾವರಣ ಕಂಡುಬಂದಿತ್ತು. ಈ ಬಗ್ಗೆ ಹೆಚ್ಚು ಚರ್ಚೆಗಳು ನಡೆಯಲಿಲ್ಲ. ಆದರೆ ಬಿಜೆಪಿ ಪಾಳಯದಲ್ಲಿ ಹಲವರು ಸ್ಪರ್ಧೆಗೆ ಮುಂದಡಿ ಇಟ್ಟಿದ್ದರು. ಮಾಜಿ ಸಚಿವರಾದ ವಿ.ಸೋಮಣ್ಣ ಹಾಗೂ ಜೆ.ಸಿ.ಮಾಧುಸ್ವಾಮಿ ನಡುವೆ ಟಿಕೆಟ್‌ಗಾಗಿ ತೀವ್ರ ವಾಕ್‌ ಸಮರವೇ ನಡೆಯಿತು. ಸಿದ್ಧಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಪರಮೇಶ್ ಸಹ ತನಗೆ ಟಿಕೆಟ್ ಖಚಿತ ಎಂಬಂತಹ ಮಾತುಗಳನ್ನಾಡಿದರು. ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಗೋಪಾಲಗೌಡ ಸೇರಿದಂತೆ ಹಲವರು ಟಿಕೆಟ್‌ಗೆ ಬೇಡಿಕೆ ಸಲ್ಲಿಸಿದ್ದಾರೆ.

ಇತ್ತೀಚಿನ ಬೆಳವಣಿಗೆ ಗಮನಿಸುತ್ತಿರುವ ಬಿಜೆಪಿ ಹೈಕಮಾಂಡ್‌ಗೆ ತುಮಕೂರು ಕ್ಷೇತ್ರ ತೀವ್ರ ತಲೆನೋವಾಗಿ ಪರಿಣಮಿಸಿದಂತೆ ಕಾಣುತ್ತಿದೆ. ಸೋಮಣ್ಣ, ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜು ನಡುವಿನ ಬಣ ರಾಜಕಾರಣದ ಜತೆಗೆ ಡಾ.ಪರಮೇಶ್ ಅವರಿಗೆ ಟಿಕೆಟ್ ನೀಡುವಂತೆ ಮಠದ ಸ್ವಾಮೀಜಿಯೊಬ್ಬರು ಹಠ ಹಿಡಿದು ಕುಳಿತಿದ್ದಾರೆ. ಕೆಲವೊಂದು ಕಟುವಾದ ಸಂದೇಶವನ್ನು ಸ್ವಾಮೀಜಿ ರವಾನಿಸಿದ್ದಾರೆ. ಇದು ಬಿಜೆಪಿ ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ADVERTISEMENT

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಸಿಕ್ಕಿದ್ದು, ಸ್ಪರ್ಧಿಸುವುದಾಗಿ ಸೋಮಣ್ಣ ಹೇಳಿಕೊಂಡಿದ್ದರು. ಸೋಮಣ್ಣ ಸ್ಪರ್ಧೆಯನ್ನೇ ವಿರೋಧಿಸಿರುವ ಡಾ.ಪರಮೇಶ್, ‘ಹೊರಗಿನವರಿಗೆ ಟಿಕೆಟ್ ನೀಡಬಾರದು’ ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ‘ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಬೆಂಬಲವಾಗಿ ನಿಂತಿದ್ದಾರೆ. ಸ್ವಾಮೀಜಿ ಆಶೀರ್ವಾದ ಮಾಡಿದ್ದು, ನನಗೆ ಟಿಕೆಟ್ ಸಿಗಲಿದೆ’ ಎಂದು ಅವರು ಖಚಿತ ಮಾತುಗಳನ್ನಾಡಿದ್ದಾರೆ. ಈ ವಿಚಾರ ಸೋಮಣ್ಣ ಅವರಿಗೂ ನುಂಗಲಾರದ ತುತ್ತಾಗಿದೆ. ಸ್ವಾಮೀಜಿಯೇ ಬೆಂಬಲ ನೀಡದಿದ್ದರೆ ಏನು ಮಾಡುವುದು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಮಾಧುಸ್ವಾಮಿ ಸಹ ಟಿಕೆಟ್‌ಗೆ ಹಟ ಹಿಡಿದು ಕುಳಿತಿದ್ದಾರೆ. ಯಾರಿಗೆ ಟಿಕೆಟ್ ಕೊಡುವುದು, ಯಾರನ್ನು ಸಮಾಧಾನಪಡಿಸುವುದು ಎಂಬ ಚಿಂತೆ ಬಿಜೆಪಿ ವರಿಷ್ಠರನ್ನು ಕಾಡುತ್ತಿದೆ.

ಜೆಡಿಎಸ್– ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದ್ದರೂ ತುಮಕೂರು ಕ್ಷೇತ್ರವನ್ನು ಯಾರಿಗೆ ಬಿಟ್ಟುಕೊಡಬೇಕು ಎಂಬುದು ಈವರೆಗೂ ನಿರ್ಧಾರವಾಗಿಲ್ಲ. ಎರಡೂ ಪಕ್ಷದವರೂ ತಮಗೆ ಕ್ಷೇತ್ರ ಬೇಕು ಎಂದು ಪಟ್ಟು ಹಿಡಿದಿಲ್ಲ. ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ವರಿಷ್ಠರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟು, ತಲೆನೋವು ಕಡಿಮೆ ಮಾಡಿಕೊಳ್ಳಲು ಚಿಂತಿಸಿದ್ದಾರೆ. ಆ ಕಾರಣಕ್ಕೆ ಎಚ್.ಡಿ.ಕುಮಾರಸ್ವಾಮಿ ಹೆಸರು ಮುನ್ನೆಲೆಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಬಿಜೆಪಿಯಲ್ಲಿ ಬಣ ರಾಜಕಾರಣದ ಬಿರುಸು ತಗ್ಗಿಸಬಹುದು. ಒಬ್ಬರಿಗೆ ಟಿಕೆಟ್ ಕೊಟ್ಟರೆ, ಮತ್ತೊಬ್ಬರು ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ. ಇದು ಫಲಿತಾಂಶದ ಮೇಲೆ ಪರಿಣಾಮ ಬೀರಲಿದ್ದು, ಇದರಿಂದ ಕಾಂಗ್ರೆಸ್‌ಗೆ ನೆರವಾಗಬಹುದು. ಇಂತಹ ಅನಾಹುತ ತಪ್ಪಿಸಿಕೊಳ್ಳಲು ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟು, ಕುಮಾರಸ್ವಾಮಿ ಕಣಕ್ಕಿಳಿ ಗೆಲ್ಲಿಸಿಕೊಂಡರೆ ತಮ್ಮ ಬಣದಲ್ಲೇ ಕ್ಷೇತ್ರ ಉಳಿಸಿಕೊಂಡತೆಯೂ ಆಗುತ್ತದೆ. ಪಕ್ಷದ ಬಂಡಾಯವನ್ನೂ ಶಮನ ಮಾಡಬಹುದು ಎಂಬ ಲೆಕ್ಕಾಚಾರ ನಡೆದಿದೆ. ಈ ವಾರಾಂತ್ಯ ಅಥವಾ ಮುಂದಿನ ವಾರದಲ್ಲಿ ಒಂದು ಸ್ಪಷ್ಟ ರೂಪ ಸಿಗಬಹುದು ಎಂದು ಮೂಲಗಳು ತಿಳಿಸಿವೆ.

ಗೌರಿಶಂಕರ್ ನಡೆ?

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ನಡೆಯೂ ನಿಗೂಢವಾಗಿದೆ. ಎಚ್.ಡಿ.ಕುಮಾರಸ್ವಾಮಿ ತುಮಕೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದರೆ ಮತ್ತೆ ಜೆಡಿಎಸ್‌ಗೆ ವಾಪಸಾಗುವ ಸಾಧ್ಯತೆಗಳ ಬಗ್ಗೆ ಅವರ ಆಪ್ತ ಬಳಗದಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರೂ ಯಾವುದೇ ಗೌರವ ಮನ್ನಣೆ ಸಿಗುತ್ತಿಲ್ಲ ಎಂದು ತಮ್ಮ ಬೆಂಬಲಿಗರ ಬಳಿ ಗೋಳು ತೋಡಿಕೊಂಡಿದ್ದಾರೆ. ಜಿಲ್ಲೆಯ ಸಚಿವರಾದ ಜಿ.ಪರಮೇಶ್ವರ ಕೆ.ಎನ್.ರಾಜಣ್ಣ ಅವರ ಕಡೆಯಿಂದ ಸ್ಪಂದನೆ ಇಲ್ಲವಾಗಿದೆ. ಕಾಂಗ್ರೆಸ್ ಜಿಲ್ಲಾ ಕಚೇರಿಗೆ ಭೇಟಿ ನೀಡಿದ ಸಮಯದಲ್ಲಿ ಸ್ವಾಗತಿಸಲು ಪಕ್ಷದ ಯಾವೊಬ್ಬ ಪ್ರಮುಖ ನಾಯಕರೂ ಇರಲಿಲ್ಲ. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರೂ ಇಲ್ಲದೆ ಸಾಕಷ್ಟು ಮುಜುಗರ ಅನುಭವಿಸಿದ್ದರು. ನಂತರ ಪಕ್ಷದ ಸಭೆ ಸಮಾರಂಭಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಮೂಲ ಕಾಂಗ್ರೆಸಿಗರು ಹಾಗೂ ಗೌರಿಶಂಕರ್ ಬೆಂಬಲಿಗರ ನಡುವೆ ಹೊಂದಾಣಿಕೆ ಸಾಧ್ಯವಾಗಿಲ್ಲ. ಗೌರಿಶಂಕರ್ ಸಹ ಪಕ್ಷದಲ್ಲಿ ಹೊಂದಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷದಲ್ಲಿ ಇರಬೇಕೆ? ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಒಂದು ವೇಳೆ ಕುಮಾರಸ್ವಾಮಿ ಸ್ಪರ್ಧಿಸಿದರೆ ಅದೇ ನೆಪ ಇಟ್ಟುಕೊಂಡು ಜೆಡಿಎಸ್‌ಗೆ ಮರಳುವ ಬಗ್ಗೆ ಚಿಂತಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.