ADVERTISEMENT

ಕಾಂಗ್ರೆಸ್‌ನಿಂದ ‘ಸ್ವಾಭಿಮಾನಿ ಸಮಾವೇಶ’

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 16:27 IST
Last Updated 16 ಅಕ್ಟೋಬರ್ 2024, 16:27 IST
ಜಿ.ಪರಮೇಶ್ವರ
ಜಿ.ಪರಮೇಶ್ವರ   

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತೇಜೋವಧೆ ಖಂಡಿಸಿ ಜಿಲ್ಲೆಯಲ್ಲಿ ‘ಸ್ವಾಭಿಮಾನಿ ಸಮಾವೇಶ’ ನಡೆಸಲು ಕಾಂಗ್ರೆಸ್‌ ಸಿದ್ಧತೆ ಆರಂಭಿಸಿದೆ.

ಈ ತಿಂಗಳ ಅಂತ್ಯದಲ್ಲಿ ಅಥವಾ ನವೆಂಬರ್‌ ಮೊದಲ ವಾರದಲ್ಲಿ ಸಮಾವೇಶ ನಡೆಯಲಿದೆ. ನಗರದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಈ ಬಗ್ಗೆ ಚರ್ಚೆ ನಡೆಸಿದರು.

‘ಬಿಜೆಪಿ, ಜೆಡಿಎಸ್‌ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಮೇಲೆ ಸಾಕಷ್ಟು ಆಪಾದನೆ ಮಾಡುತ್ತಿದ್ದಾರೆ. ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ನಡೆಸುತ್ತಿದ್ದಾರೆ. ವಿರೋಧ ಪಕ್ಷದ ಹುನ್ನಾರವನ್ನು ಜನರಿಗೆ ಮನವರಿಕೆ ಮಾಡಲು ಸಮಾವೇಶ ಏರ್ಪಡಿಸಲಾಗಿದೆ’ ಎಂದರು.

ADVERTISEMENT

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ 136 ಸ್ಥಾನ ಗಳಿಸಿದೆ. ಇದೇ ರೀತಿ ಮುಂದುವರಿದರೆ ಪಕ್ಷ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ನವದೆಹಲಿಯಲ್ಲಿ ಸರ್ಕಾರದ ವಿರುದ್ಧ ಪಿತೂರಿ ನಡೆಸಿದ್ದಾರೆ. ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಜೆಡಿಎಸ್‌ ನಾಯಕರಿಗೆ ಸೂಚಿಸಿದ್ದಾರೆ. ಮೈತ್ರಿ ನಾಯಕರು ಸೇರಿಕೊಂಡು ಸಿದ್ದರಾಮಯ್ಯ ವರ್ಚಸ್ಸಿಗೆ ಮಸಿ ಬಳಿಯುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ ಲೋಕಸಭಾ ಚುನಾವಣೆ ಜೆಡಿಎಸ್‌ಗೆ ಪುನರ್‌ ಜನ್ಮ ನೀಡಿತು. ಎಚ್‌.ಡಿ.ಕುಮಾರಸ್ವಾಮಿ ಅದೃಷ್ಟ ಎಂಬಂತೆ ಕೇಂದ್ರದಲ್ಲಿ ಒಳ್ಳೆ ಖಾತೆಯ ಮಂತ್ರಿಯಾದರು. ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಯೋಜನೆ ರೂಪಿಸುವುದು ಬಿಟ್ಟು, ರಾಜ್ಯದಲ್ಲಿ ಅವರಿವರ ಮೇಲೆ ಆಪಾದನೆ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ‘ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಲು ಕಾರ್ಯಕರ್ತರು ತಳಮಟ್ಟದಲ್ಲಿ ಕೆಲಸ ಮಾಡಬೇಕು. ಸಮಾವೇಶವು ಮಹಾನಗರ ಪಾಲಿಕೆ, ಜಿ.ಪಂ, ತಾ.ಪಂ ಚುನಾವಣೆಗೆ ನೆರವಾಗುತ್ತದೆ. ಸಂಘಟನೆ, ಚುನಾವಣೆ, ಸ್ವಾಭಿಮಾನದ ದೃಷ್ಟಿಯಿಂದ ಅನುಕೂಲವಾಗುತ್ತದೆ. ಮಧುಗಿರಿಯಲ್ಲಿ ಸಮಾವೇಶ ಮಾಡಿದರೆ ಈ ಭಾಗದ ಜನ ಭಾಗವಹಿಸಲು ಸುಲಭವಾಗುತ್ತದೆ’ ಎಂದು ಮನವಿ ಮಾಡಿದರು.

ಶಾಸಕರಾದ ಕೆ.ಷಡಕ್ಷರಿ, ಎಚ್‌.ವಿ.ವೆಂಕಟೇಶ್‌, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಚಂದ್ರಶೇಖರ್‌ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.