ADVERTISEMENT

ಜಿಲ್ಲಾ ಅಲ್ಪಸಂಖ್ಯಾತರ ಸಮಾವೇಶಕ್ಕೆ ಕಡೆಗಣನೆ

ಕೆಪಿಸಿಸಿ ಅಧ್ಯಕ್ಷರಿಗೆ ದೂರು; ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಚ್. ಅತೀಖ್ ಅಹಮ್ಮದ್

​ಪ್ರಜಾವಾಣಿ ವಾರ್ತೆ
Published 2 ಮೇ 2019, 10:43 IST
Last Updated 2 ಮೇ 2019, 10:43 IST
ಎಚ್.ಅತೀಕ್‌ ಅಹಮ್ಮದ್
ಎಚ್.ಅತೀಕ್‌ ಅಹಮ್ಮದ್   

ತುಮಕೂರು: ಭಾನುವಾರ ನಗರದಲ್ಲಿ ನಡೆದ ಕಾಂಗ್ರೆಸ್– ಜೆಡಿಎಸ್ ಅಲ್ಪಸಂಖ್ಯಾತ ಕಾರ್ಯಕರ್ತರ ಸಮಾವೇಶಕ್ಕೆ ತುಮಕೂರು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮತ್ತು ಪದಾಧಿಕಾರಿಗಳನ್ನು ಆಹ್ವಾನಿಸದೇ ಸಂಪೂರ್ಣ ಕಡೆಗಣಿಸಿದ್ದು, ಈ ಬಗ್ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ದೂರು ಸಲ್ಲಿಸಲಾಗುವುದು ಎಂದು ಘಟಕದ ಅಧ್ಯಕ್ಷ ಎಚ್.ಅತೀಕ್‌ ಅಹಮ್ಮದ್ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಇಷ್ಟೊಂದು ಬೃಹತ್ ಸಮಾವೇಶ ಆಯೋಜನೆ ಮಾಡಿದ್ದರೂ ಕಾಂಗ್ರೆಸ್ ಅಲ್ಪಸಂಖ್ಯಾತರ ಜಿಲ್ಲಾ ಘಟಕಕ್ಕೆ ಮಾಹಿತಿಯೂ ಇಲ್ಲ. ಆಹ್ವಾನವೂ ಇಲ್ಲ. ಜಿಲ್ಲಾ ಕಾಂಗ್ರೆಸ್ ಘಟಕ ಅಧ್ಯಕ್ಷ ಆರ್. ರಾಮಕೃಷ್ಣ ಅವರನ್ನು ಕೇಳಿದರೆ ಅವರಿಗೂ ಮಾಹಿತಿ ಇಲ್ಲ ಎಂದು ಹೇಳಿದರು. ಅದೇ ರೀತಿ ಕಾಂಗ್ರೆಸ್ ರಾಜ್ಯ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ವೈ.ಸಿ.ಅಹ್ಮದ್ ಅವರನ್ನು ಈ ಕುರಿತು ಕೇಳಿದಾಗ ಈ ವಿಷಯ ತಮಗೆ ಗೊತ್ತೇ ಇಲ್ಲ ಎಂದು ಹೇಳಿದ್ದಾರೆ’ ಎಂದು ವಿವರಿಸಿದರು.

‘ಯಾರಿಗೂ ಮಾಹಿತಿ, ಆಹ್ವಾನ ಇಲ್ಲದೇ ಈ ರೀತಿ ಸಮಾವೇಶ ನಡೆಸಿರುವುದು ಸಮಿತಿ ಅಧ್ಯಕ್ಷನಾದ ನನಗೆ, ಪದಾಧಿಕಾರಿಗಳಿಗೆ ನೋವಾಗಿದೆ. ಹೀಗಾಗಿಯೇ ಕೆಪಿಸಿಸಿ ಅಧ್ಯಕ್ಷರಿಗೆ ದೂರು ಸಲ್ಲಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಜಿಲ್ಲಾ ಆಧ್ಯಕ್ಷನಾದ ಬಳಿಕ 8 ಸಾವಿರ ಸದಸ್ಯತ್ವ ನೋಂದಣಿ ಮಾಡಿಸಿದ್ದೇನೆ. ಪಕ್ಷ ಸಂಘಟನೆ, ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳು ಕಡಿಮೆ ಆಗಬಾರದು ಎಂದು ದೂರದೃಷ್ಟಿ ಯೋಜನೆ ಇಟ್ಟುಕೊಂಡು ಸಕ್ರಿಯವಾಗಿ ಕೆಲಸ ಮಾಡಲಾಗುತ್ತಿದೆ. ಆದರೆ, ಅಲ್ಪಸಂಖ್ಯಾತರ ಸಮಾವೇಶಕ್ಕೇ ನಮ್ಮನ್ನು ಕಡೆಗಣಿಸಿದ್ದು ಬೇಸರ ತಂದಿದೆ’ ಎಂದು ತಿಳಿಸಿದರು.

‘ಮೈತ್ರಿ ಪಕ್ಷದ ಅಭ್ಯರ್ಥಿ ಎಚ್.ಡಿ.ದೇವೇಗೌಡರು ಈ ಕ್ಷೇತ್ರದಲ್ಲಿ ಆಯ್ಕೆಯಾಗಬೇಕು ಎಂಬುದು ನಮ್ಮ ಆಶಯ. ಹೀಗಾಗಿ, ಚುನಾವಣೆಯಲ್ಲಿ ಅವರ ಪರವಾಗಿಯೇ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

ಭಾನುವಾರ ಸಂಜೆಯೇ ಸಮಾವೇಶ ವಿರೋಧಿಸುವ ಉದ್ದೇಶವಿತ್ತು. ಆದಾಗ್ಯೂ ತಾಳ್ಮೆಯಿಂದ ನಡೆದುಕೊಂಡಿದ್ದೇವೆ. ಡಾ.ಪರಮೇಶ್ವರ, ಜಮೀರ್ ಅಹಮ್ಮದ್ ಖಾನ್ ಅವರ ಗಮನಕ್ಕೂ ತಂದಿದ್ದೇವೆ ಎಂದು ತಿಳಿಸಿದರು.

ಪದಾಧಿಕಾರಿಗಳಾದ ಸನ್ಮತಿಕುಮಾರ್ ಜೈನ್, ಥಾಮ್ಸನ್, ಅಲ್ಲಾಬಕ್ಷ, ನಿಶಾ, ಷಫಿ, ದಾದಾಪೀರ್, ರೆಹಮತ್ ಉಲ್ಲಾಸಾಬ್, ಸೈಯದ್ ಖಾದರ್ ಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.