ADVERTISEMENT

ಖಾಸಗಿ ಬಸ್ ನಿಲ್ದಾಣ ಕೆಎಸ್‌ಆರ್‌ಟಿಸಿಗೆ ಹಸ್ತಾಂತರಿಸಲು ಪ್ರಸ್ತಾವನೆ: ಚರ್ಚೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 15:31 IST
Last Updated 9 ಜುಲೈ 2024, 15:31 IST
ಪಾವಗಡದಲ್ಲಿ ಸೋಮವಾರ ನಡೆದ ಪುರಸಭೆ ವಿಶೇಷ ಸಭೆಯಲ್ಲಿ ಪುರಸಭೆ ಮುಖ್ಯಾದಿಕಾರಿ ಷಂಷುದ್ದಹ ಮಾತನಾಡಿದರು
ಪಾವಗಡದಲ್ಲಿ ಸೋಮವಾರ ನಡೆದ ಪುರಸಭೆ ವಿಶೇಷ ಸಭೆಯಲ್ಲಿ ಪುರಸಭೆ ಮುಖ್ಯಾದಿಕಾರಿ ಷಂಷುದ್ದಹ ಮಾತನಾಡಿದರು   

ಪಾವಗಡ: ಪಟ್ಟಣದಲ್ಲಿ ಸೋಮವಾರ ನಡೆದ ಪುರಸಭೆ ವಿಶೇಷ ಸಭೆಯಲ್ಲಿ ಸದಸ್ಯರು ಪಟ್ಟಣದ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿದರು.

ಶಿರಾ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಹಲವು ತಿಂಗಳುಗಳಿಂದ ಕಾಮಗಾರಿಯನ್ನು ಬೇಕಾಬಿಟ್ಟಿ ನಡೆಸಲಾಗುತ್ತಿದೆ. ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಅಪಘಾತಗಳು ಹೆಚ್ಚುತ್ತಿವೆ. ಹೀಗಾಗಿ ಈ ಕಾಮಗಾರಿ ಬಿಲ್ ತಡೆಹಿಡಿಯಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಬಡಾವಣೆಗಳಲ್ಲಿ ನಾಯಿಗಳ ಕಾಟ ಹೆಚ್ಚಿದೆ. ಚರಂಡಿಗಳನ್ನು ಸ್ವಚ್ಛ ಮಾಡದ ಕಾರಣ ಸೊಳ್ಳೆ, ಹಂದಿಗಳ ಕಾಟ ಮಿತಿ ಮೀರಿದೆ. ಡೆಂಗಿ ಪ್ರಕರಣಗಳನ್ನು ನಿಯಂತ್ರಿಸುವ ಹಿನ್ನೆಲೆ ಚರಂಡಿಗಳ ಸ್ವಚ್ಛತೆ ಮಾಡಿ ಸೊಳ್ಳೆಗಳನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಪುರಸಭೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ಕೆಲಸ, ಕಾರ್ಯಗಳು ಆಮೆಗತಿಯಲ್ಲಿ ಸಾಗುತ್ತಿವೆ. ಈ ಕೂಡಲೇ ಸಿಬ್ಬಂದಿಯನ್ನು ನಿಯೋಜಿಸಬೇಕು. ಇಲ್ಲಿನ ಸಿಬ್ಬಂದಿ, ಅಧಿಕಾರಿಗಳು ಪುರಸಭೆ ಸದಸ್ಯರ ಮಾತನ್ನು ಕೇಳುತ್ತಿಲ್ಲ. ಸಾರ್ವಜನಿಕರ ಕೆಲಸ ಮಾಡಿಕೊಡಿ ಎಂದರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಪಟ್ಟಣದಲ್ಲಿ ಪುರಸಭೆಯಿಂದ ನಿರ್ಮಿಸಿರುವ ಬಸ್ ನಿಲ್ದಾಣವನ್ನು ಕೆಎಸ್‌ಆರ್‌ಟಿಸಿ ಸಂಸ್ಥೆಗೆ ನೀಡುವಂತೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈಗಿರುವ ಮಳಿಗೆಗಳನ್ನು ಪುರಸಭೆಗೆ ಉಳಿಸಿಕೊಂಡು, ಹೊಸದಾಗಿ ನಿರ್ಮಿಸುವ ಕೊಠಡಿಗಳ ಬಾಡಿಗೆಯಲ್ಲಿ ಪಾಲು ನೀಡಿದಲ್ಲಿ ಪುರಸಭೆ ಆದಾಯಕ್ಕೂ ಸಮಸ್ಯೆಯಾಗುವುದಿಲ್ಲ ಎಂದು ಸದಸ್ಯರು ಅಭಿಪ್ರಾಯಪಟ್ಟರು.

ಶಾಸಕ ಎಚ್‌.ವಿ. ವೆಂಕಟೇಶ್ ಮಾತನಾಡಿ, ಬಸ್ ನಿಲ್ದಾಣದ ಬಗ್ಗೆ ಸಾರಿಗೆ ಸಚಿವರು, ಕೆಎಸ್‌ಆರ್‌ಟಿಸಿ ಸಂಸ್ಥೆಯ ಪ್ರಮುಖರ ಬಳಿ ಚರ್ಚಿಸಲಾಗುವುದು. ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಮಾಡಿಕೊಡಬೇಕು ಎಂದರು.

ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪ, ಪುರಸಭೆ ಮುಖ್ಯಾಧಿಕಾರಿ ಷಂಷುದ್ದಹ, ಹನುಮಂತರಾಯಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುನಿತ, ಪುರಸಭಾ ಸದಸ್ಯ ಸುದೇಶ್ ಬಾಬು, ರವಿ, ರಾಜೇಶ್, ವೆಂಕಟರಮಣಪ್ಪ, ರಾಮಾಂಜಿನಪ್ಪ, ವೇಲುರಾಜು, ಮೊಹಮ್ಮದ್ ಇಮ್ರಾನ್, ಸಿ.ಎನ್. ರವಿ, ಬಾಲಸುಬ್ರಹ್ಮಣ್ಯ, ನಾಗಭೂಷಣ್ ರೆಡ್ಡಿ, ಗೊರ್ತಿ ನಾಗರಾಜ್, ವಿಜಯ್ ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.