ADVERTISEMENT

ಎಂ.ಸ್ಯಾಂಡ್ ಕಂಪನಿಗೆ ಜಮೀನು; ವಿರೋಧ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿ ಎದುರು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 16:30 IST
Last Updated 17 ಫೆಬ್ರುವರಿ 2020, 16:30 IST
ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿ ತಂಗನಹಳ್ಳಿ ಗ್ರಾಮದ ಬಳಿ ಎಂ.ಸ್ಯಾಂಡ್ ಕೈಗಾರಿಕೆ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಸ್ಥಳೀಯರು ಹಾಗೂ ರೈತರು ತುಮಕೂರಿನ ಕೆಐಎಡಿಬಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದರು
ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿ ತಂಗನಹಳ್ಳಿ ಗ್ರಾಮದ ಬಳಿ ಎಂ.ಸ್ಯಾಂಡ್ ಕೈಗಾರಿಕೆ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಸ್ಥಳೀಯರು ಹಾಗೂ ರೈತರು ತುಮಕೂರಿನ ಕೆಐಎಡಿಬಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದರು   

ತುಮಕೂರು: ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿ ತಂಗನಹಳ್ಳಿ ಗ್ರಾಮದ ಬಳಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ರೈತರಿಂದ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ಎಂ.ಸ್ಯಾಂಡ್ ಕಂಪನಿಗೆ ನೀಡಲು ಮುಂದಾಗಿದೆ. ಕೆಐಎಡಿಬಿಯ ಈ ನಿರ್ಧಾರಕ್ಕೆ ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿ ನಗರದ ಕೆಐಎಡಿಬಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಕೋಳಾಲ ಜಿಲ್ಲಾ ಪಂಚಾಯಿತಿ ಸದಸ್ಯ ಶಿವರಾಮಯ್ಯ ಮಾತನಾಡಿ, ‘ತಂಗನಹಳ್ಳಿ ಗ್ರಾಮದ ಸ.ನಂ. 14/1ಎ, 16/2, 17/1, 17/5, 18/1, 45, 56, 56/2 ಹಾಗೂ 58ರಲ್ಲಿರುವ ಜಮೀನನ್ನು ಮೆ.ಬಿ.ಕೆ.ಜಿ.ಎಂ.ಸ್ಯಾಂಡ್ ಕಂಪನಿಗೆ ನೀಡಲು ಭೂ ಸ್ವಾಧಿನ ಮಾಡಿಕೊಳ್ಳಲು ಮುಂದಾಗಿರುವುದು ಖಂಡನೀಯ’ ಎಂದು ತಿಳಿಸಿದರು.

ಈ ಜಮೀನುಗಳ 100 ಮೀಟರ್ ಅಂತರದಲ್ಲಿಯೇ ಶಾಲೆ, ದೇವಾಲಯ, ಗ್ರಾಮಗಳು ಇವೆ. ಅಲ್ಲದೆ ಎತ್ತಿನ ಹೊಳೆ ಬಫರ್ ಡ್ಯಾಂ ಸಹ ನಿರ್ಮಾಣವಾಗುತ್ತಿದೆ. ಈ ಭಾಗವನ್ನು ಎಂ.ಸ್ಯಾಂಡ್ ಕಂಪನಿಗೆ ನೀಡಿದರೆ ಜನ, ಜಾನುವಾರುಗಳಿಗೆ ತೊಂದರೆ ಆಗಲಿದೆ. ಆದ್ದರಿಂದ ಭೂಸ್ವಾಧೀನ ಕೈ ಬಿಡಬೇಕು ಎಂದು ಆಗ್ರಹಿಸಿದರು.

ADVERTISEMENT

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ತಂಗನಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳ ಜಮೀನನ್ನು ಕೈಗಾರಿಕೆಗಳ ಸ್ಥಾಪನೆಗೆ ವಶಪಡಿಸಿಕೊಂಡರೆ ಅಲ್ಲಿನ ಜನರು ಮನೆ, ಮಠಗಳನ್ನು ಕಳೆದುಕೊಳ್ಳುವರು. ಇವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಈ ಯೋಜನೆಯಿಂದ ಜನಸಾಮಾನ್ಯರಿಗೆ ಆಗುವ ನಷ್ಟಗಳ ಕುರಿತು ಸಾಮಾಜಿಕ ವರದಿ ತಯಾರಿಸಬೇಕು. ಸಾಧಕ ಬಾಧಕಗಳ ಕುರಿತು ಸಾರ್ವಜನಿಕರೊಂದಿಗೆ ಚರ್ಚಿಸಬೇಕು. ಗ್ರಾಮ ಪಂಚಾಯಿತಿ ಒಪ್ಪಿಗೆ ಪಡೆದು, ನಂತರ ಭೂ ಸ್ವಾಧೀನಕ್ಕೆ ಕೈ ಹಾಕಬೇಕು. ಜನರನ್ನು ಸಂಪರ್ಕಿಸದೆ ಪರಿಸರಕ್ಕೆ ಹಾನಿ ಆಗುವಂತಹ ಕೈಗಾರಿಕೆ ಸ್ಥಾಪಿಸಲು ಹೊರಟಿರುವುದು ದುರದೃಷ್ಟಕರ. ಕೂಡಲೇ ಇದನ್ನು ಕೈಬಿಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಕಾಳೇಗೌಡ, ರಂಗಹನುಮಯ್ಯ, ಕೆ.ಎಸ್.ಗಂಗಾಧರಗೌಡ, ಕಾಮರಾಜು, ಶಬ್ಬೀರ್ ಪಾಷ, ಲಕ್ಷ್ಮಿಕಾಂತಯ್ಯ, ಬೋಪಣ್ಣ ಹಾಗೂ ರೈತರು ಪ್ರತಿಭಟನೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.