ADVERTISEMENT

ಪರೀಕ್ಷಾ ಅಕ್ರಮ ಖಂಡಿಸಿ ಎಐಡಿಎಸ್‌ಒ ಪ್ರತಿಭಟನೆ: ಎನ್‌ಟಿಎ ರದ್ದತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 5:51 IST
Last Updated 6 ಜುಲೈ 2024, 5:51 IST
ತುಮಕೂರಿನಲ್ಲಿ ಶುಕ್ರವಾರ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು
ತುಮಕೂರಿನಲ್ಲಿ ಶುಕ್ರವಾರ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು   

ತುಮಕೂರು: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ರದ್ದುಗೊಳಿಸುವಂತೆ ಆಗ್ರಹಿಸಿ, ನೀಟ್‌, ನೆಟ್‌ ಹಗರಣ ಖಂಡಿಸಿ ವಿದ್ಯಾರ್ಥಿಗಳು ಎಐಡಿಎಸ್‌ಒ ನೇತೃತ್ವದಲ್ಲಿ ನಗರದ ಬಿಜಿಎಸ್‌ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

‘ನೀಟ್‌ ಪರೀಕ್ಷೆಯ ಅಕ್ರಮ ಇಡೀ ದೇಶವನ್ನೇ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ. ಲಕ್ಷಾಂತರ ಮಂದಿ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸನ್ನು ನುಚ್ಚುನೂರು ಮಾಡಿದೆ. ಇದು ಶಿಕ್ಷಣ ಕ್ಷೇತ್ರದ ಅತಿದೊಡ್ಡ ಹಗರಣ’ ಎಂದು ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಸಿ.ಬಿ.ಲಕ್ಕಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ನೆಟ್ ಪರೀಕ್ಷೆ ನಡೆದ ಮರು ದಿನವೇ ಕೇಂದ್ರ ಶಿಕ್ಷಣ ಸಚಿವಾಲಯ ಪರೀಕ್ಷೆಯನ್ನೇ ರದ್ದುಪಡಿಸಿದೆ. ಎನ್‍ಟಿಎ ನಡೆಸಿದ ಪರೀಕ್ಷೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಒಪ್ಪಿಕೊಂಡು ಸಿಬಿಐ ತನಿಖೆಗೆ ವಹಿಸಿದೆ. ಆದರೆ, ಇದೇ ಎನ್‍ಟಿಎ ನೇತೃತ್ವದಲ್ಲಿ ನಡೆದಿರುವ ನೀಟ್ ಪರೀಕ್ಷೆಯನ್ನು ಯಾಕೆ ರದ್ದು ಮಾಡಿಲ್ಲ? ಆತಂಕದಲ್ಲಿರುವ ಅಭ್ಯರ್ಥಿ, ಪೋಷಕರ ಪರ ನಿಲ್ಲಬೇಕಾದ ಶಿಕ್ಷಣ ಸಚಿವಾಲಯ ತನಿಖೆ ನಡೆಯುತ್ತಿದೆ ಎಂದು ತೇಪೆ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ADVERTISEMENT

ಎಐಡಿಎಸ್‌ಒ ಜಿಲ್ಲಾ ಕಚೇರಿ ಕಾರ್ಯದರ್ಶಿ ಅಕ್ಷರ, ‘ಶಿಕ್ಷಣದ ವ್ಯಾಪಾರೀಕರಣದಿಂದ ಭ್ರಷ್ಟಾಚಾರ ಹೆಚ್ಚುತ್ತಿದೆ. ಕೇಂದ್ರ ಸರ್ಕಾರ ಶಿಕ್ಷಕರು ಮತ್ತು ಅಗತ್ಯ ಸೌಲಭ್ಯ ಒದಗಿಸಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಪಡಿಸಬೇಕು’ ಎಂದು ಆಗ್ರಹಿಸಿದರು.

ಎಐಡಿಎಸ್‍ಒ ಪದಾಧಿಕಾರಿಗಳಾದ ಭರತ್‌, ಪಲ್ಲವಿ, ಸುಮಂತ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.