ತುಮಕೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರ ಗುತ್ತಿಗೆಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಕಾಯಂ ಮಾಡುವಂತೆ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಮಹಾನಗರ ಪಾಲಿಕೆ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
‘ಪೌರ ಕಾರ್ಮಿಕರು, ಲೋಡರ್ಸ್, ಕಸದ ವಾಹನ ಚಾಲಕರು, ಸಹಾಯಕರು, ನೀರು ಸರಬರಾಜು ವಿಭಾಗದ ಕಾರ್ಮಿಕರು, ಪಾರ್ಕ್, ಸ್ಮಶಾನ ಸ್ವಚ್ಛತಾಗಾರರು, ಘನತ್ಯಾಜ್ಯ ವಿಲೇವಾರಿ, ಯುಜಿಡಿ ನೀರು ಸಂಸ್ಕರಣಾ ಕಾರ್ಮಿಕರು ಕಳೆದ 20 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಸೇವೆ ಕಾಯಂಗೊಳಿಸುವಾಗ ಕಾರ್ಮಿಕರನ್ನು ವಿಭಜಿಸಿ, ಪರಸ್ಪರ ಕಿತ್ತಾಡುವಂತೆ ಮಾಡುತ್ತಿರುವುದು ಖಂಡನೀಯ’ ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್ ಅಸಮಾಧಾನ ವ್ಯಕ್ತಪಡಿಸಿದರು.
ವಾಹನ ಚಾಲಕರ ಸಂಘದ ಅಧ್ಯಕ್ಷ ಪ್ರಕಾಶ್, ‘ಕಾಯಂಗೊಳಿಸುವ ತನಕ ಎಲ್ಲ ಕಾರ್ಮಿಕರಿಗೆ ನೇರ ಪಾವತಿಯಡಿ ಸಂಬಳ ಕೊಡಬೇಕು. ಕಾಂಗ್ರೆಸ್ ಸರ್ಕಾರ ಎಲ್ಲ ಮುನಿಸಿಪಲ್ ಕಾರ್ಮಿಕರಿಗೆ ಕಾಯಮಾತಿ ಗ್ಯಾರಂಟಿ ನೀಡಬೇಕು’ ಎಂದು ಒತ್ತಾಯಿಸಿದರು.
ನೀರು ಸರಬರಾಜು ನೌಕರರ ಸಂಘದ ಅಧ್ಯಕ್ಷ ಕುಮಾರ್, ‘ಎಲ್ಲ ಕಾರ್ಮಿಕರಿಗೆ ದಿನದಲ್ಲಿ 8 ಗಂಟೆ ಕೆಲಸ, ಹೆಚ್ಚುವರಿ ಕೆಲಸಕ್ಕೆ ಕಾನೂನು ಬದ್ಧ ವೇತನ, ರಜೆಯ ಸೌಲಭ್ಯ ಕಲ್ಪಿಸಬೇಕು. ನಿವೃತ್ತಿ, ಮರಣಹೊಂದಿದ ಮುನಿಸಿಪಲ್ ಕಾರ್ಮಿಕರ ಅವಲಂಬಿತರಿಗೆ ಉಪಧನ ನೀಡಲು ಸರ್ಕಾರ ಕ್ರಮ ವಹಿಸಬೇಕು’ ಎಂದು ಮನವಿ ಮಾಡಿದರು.
ಮಹಾನಗರ ಪಾಲಿಕೆ ಉಪ ಆಯುಕ್ತ ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು. ವಿವಿಧ ಸಂಘಟನೆಗಳ ಮುಖಂಡರಾದ ಮಂಜುನಾಥ್, ಮಾರುತಿ, ರಾಮಚಂದ್ರು, ಶ್ರೀನಿವಾಸ್, ಸಾಧಿಕ್, ಆನಂದಕುಮಾರ್, ಗಂಗಾಧರ್, ಎನ್.ನಾಗರಾಜು ಇತರರು ಭಾಗವಹಿಸಿದ್ದರು.
30ಕ್ಕೆ ವಿಧಾನಸೌಧ ಚಲೋ
‘ಮುನಿಸಿಪಲ್ ಕಾರ್ಮಿಕರ ಕಾಯಮಾತಿಗೆ ಆಗ್ರಹಿಸಿ ಸೆ. 30ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ’ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ತಿಳಿಸಿದರು. ಕಾರ್ಮಿಕರು ಅಲ್ಪ ವೇತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮನೆಯ ಬಾಡಿಗೆ ಪಾವತಿಯೂ ಕಷ್ಟವಾಗುತ್ತಿದೆ. ಎಲ್ಲರಿಗೆ ಸರ್ಕಾರದ ಗೃಹ ಭಾಗ್ಯ ಯೋಜನೆಯಡಿ ಉಚಿತವಾಗಿ ನಿವೇಶನ ಕಲ್ಪಿಸಿ ಮನೆ ನಿರ್ಮಾಣಕ್ಕೆ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.