ಕುಣಿಗಲ್: ತಾಲ್ಲೂಕು ಒಕ್ಕಲಿಗರ ಸಂಘದ ಸದಸ್ಯತ್ವಕ್ಕೆ ಆಗ್ರಹಿಸಿದ ಒಕ್ಕಲಿಗರ ಗುಂಪು ಸಂಘದ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿತು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅರುಣ್ ಕುಮಾರ್, ತಾಲ್ಲೂಕು ಒಕ್ಕಲಿಗರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸ್ಥಾಪಿತವಾದ ಸಂಘದಲ್ಲಿ 25 ವರ್ಷಗಳಿಂದ ಅಧ್ಯಕ್ಷ ಬಿ.ಬಿ.ರಾಮಸ್ವಾಮಿಗೌಡ ನೀತಿ ನಿಯಮಗಳನ್ನು ಗಾಳಿಗೆ ತೂರಿ ಆಡಳಿತ ನಡೆಸುತ್ತಿದ್ದಾರೆ. ತಾಲ್ಲೂಕಿನಲ್ಲಿ 1.50 ಲಕ್ಷ ಒಕ್ಕಲಿಗರಿದ್ದರೂ ಕೇವಲ 611 ಮಂದಿಗೆ ಸದಸ್ಯತ್ವ ನೀಡಿ ದರ್ಬಾರ್ ನಡೆಸುತ್ತಿದ್ದಾರೆ ಎಂದು ದೂರಿದರು.
ನಿಯಾಮವಳಿ ಪ್ರಕಾರ ಎರಡು ವರ್ಷಕ್ಕೊಮ್ಮೆ ಚುನಾವಣೆ ನಡಯಬೇಕಿದ್ದು, ಐದು ವರ್ಷಕೊಮ್ಮೆ ಮಾಡಿಕೊಂಡು ಅಧಿಕಾರ ನಡೆಸಲು ಮುಂದಾಗಿದ್ದಾರೆ. ಸಂಘದ ಸ್ಥಾಪನೆಗೆ ಕಾರಣವಾದ ಮತ್ತು ತಾಲ್ಲೂಕು ಪ್ರತಿನಿಧಿಸಿದ ಶಾಸಕರ ಮತ್ತು ಕುಟುಂಬಗಳು ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದ್ದರೂ ಸದಸತ್ವ ನೀಡದೆ ಮುಂದುವರೆದಿದ್ದಾರೆ. ಸದಸ್ಯತ್ವ ನೀಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಮುಖಂಡರಾದ ಬಿ.ಎಂ.ಹುಚ್ಚೇಗೌಡ, ಭೈರಪ್ಪ, ಸಿದ್ದರಾಮಯ್ಯ, ಶಿವಣ್ಣ, ರಂಗಸ್ವಾಮಿ, ಕೃಷ್ಣಪ್ಪ, ಪ್ರೆಸ್ ರಂಗಸ್ವಾಮಿ, ಚಂದ್ರಪ್ಪ, ನಾರಾಯಣ ಹಾಜರಿದ್ದರು.
135 ಅರ್ಜಿ ಸ್ವೀಕಾರ: ಸದಸ್ಯತ್ವಕ್ಕಾಗಿ ಪ್ರತಿಭಟನೆ ನಡೆಯುತ್ತಿದ್ದ ಸಮಯದಲ್ಲಿ ಅಧ್ಯಕ್ಷ ಬಿ.ಬಿ.ರಾಮಸ್ವಾಮಿಗೌಡ ಬೆಂಗಳೂರಿಗೆ ತೆರಳಿದ್ದು, ಕಚೇರಿಯಲ್ಲಿದ್ದ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯತ್ವ ಬಯಸಿದವರಿಂದ ಅರ್ಜಿಗಳನ್ನು ಸ್ವೀಕರಿಸಲು ನೀಡಿದ ಸೂಚನೆ ಮೇರೆಗೆ ಕಚೇರಿ ಸಿಬ್ಬಂದಿ 135 ಅರ್ಜಿಗಳನ್ನು ಸ್ವೀಕರಿಸಿ, ಸ್ವೀಕೃತಿ ಪತ್ರ ನೀಡಿದ್ದಾರೆ.
ಕಚೇರಿ ಆವರಣದಲ್ಲಿ ಜ್ಞಾನಭಾರತಿ ವಿದ್ಯಾಸಂಸ್ಥೆಯ ತರಗತಿಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ಎಚ್ಚರಿಕೆಯ ಕ್ರಮ ತೆಗೆದುಕೊಳ್ಳಲು ಸಂಘದವರು ನೀಡಿದ ಮನವಿ ಮೇರೆಗೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.