ತುಮಕೂರು: ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ‘ಅಸ್ಪೃಶ್ಯ ಜನಾಂಗದ ವಕೀಲ ಮಿತ್ರರ ಒಳಮೀಸಲಾತಿ ಹೋರಾಟ ಸಮಿತಿ’ ನೇತೃತ್ವದಲ್ಲಿ ವಕೀಲರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯದಲ್ಲೂ ಒಳ ಮೀಸಲಾತಿ ಜಾರಿ ಮಾಡಬೇಕು. ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ಮೂರು ದಶಕಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಪರಿಶಿಷ್ಟ ಜಾತಿ ಜನಾಂಗದಲ್ಲಿರುವ 101 ಜಾತಿಗಳಿಗೆ ಜನಸಂಖ್ಯೆ ಆಧಾರದಲ್ಲಿ ಅವಕಾಶ, ಸವಲತ್ತು ದೊರೆಯಬೇಕು ಎಂದರು.
ಪರಿಶಿಷ್ಟ ಜಾತಿಗಳಿಗೆ ಮೀಸಲಾತಿಯು ಅಸಮಾನವಾಗಿ ಹಂಚಿಕೆಯಾಗುತ್ತಿದ್ದು, ಅನ್ಯಾಯ ಸರಿಪಡಿಸಿ ನ್ಯಾಯಯುತವಾಗಿ ನಮ್ಮ ಪಾಲು ನಮಗೆ ಸಿಗಬೇಕು. ಮೀಸಲಾತಿಯ ಹೆಚ್ಚಿನ ಪಾಲನ್ನು ಪರಿಶಿಷ್ಟರ ಗುಂಪಿನಲ್ಲಿರುವ ಸ್ಪರ್ಶ ಜನಾಂಗದವರು ಪಡೆದುಕೊಂಡು ಉಳಿದವರಿಗೆ ಅನ್ಯಾಯವಾಗುತ್ತಿದೆ. ಅಸ್ಪೃಶ್ಯ ಜಾತಿಯವರು ಇಂದಿಗೂ ಅವಕಾಶಗಳಿಂದ ವಂಚಿತರಾಗಿದ್ದಾರೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ವಕೀಲರಾದ ರಂಗಧಾಮಯ್ಯ, ಗೋವಿಂದರಾಜು, ಹರೀಶ್, ರಾಮಾಂಜನಯ್ಯ, ಲಿಂಗರಾಜು, ಕೆ.ಎನ್.ಹರೀಶ್, ಮರಿಚೆನ್ನಮ್ಮ, ವೆಂಕಟೇಶ್, ನಾಗರಾಜು, ಪಾಲಯ್ಯ, ಸುಮಲತ, ಮಂಜುಳಾ, ಮಂಗಳ, ಓಬಳೇಶ್, ಜಗದೀಶ್, ನಾಗೇಶ್ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.